ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡು ಬಾಲಕ ಸಾವನ್ನಪ್ಪಿದ ಘಟನೆ ನಗರದ ಆಡುಗೊಡಿಯಲ್ಲಿ ನಡೆದಿದೆ. ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದು, ಅವರಲ್ಲಿ ಮೂವರ ಸ್ಥಿತಿ ಗಂಭಿರವಾಗಿದೆ ಎಂದು ತಿಳಿದುಬಂದಿದೆ. ಮುಬಾರಕ್ (8) ಮೃತ ಬಾಲಕ.
ತಿಮ್ಮರಾಜು ಎನ್ನುವವರ ಮನೆಯಲ್ಲಿ ಸ್ಫೋಟ ಸಂಭವಿಸಿದ್ದು, ಆ ಮನೆ ಸಂಪೂರ್ಣ ಛಿದ್ರವಾಗಿದ್ದು, ಸ್ಫೋಟದಿಂದ ಅಕ್ಕಪಕ್ಕದ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಗಾಯಾಳುಗಳು ತೀವ್ರ ರಕ್ತಸ್ರಾವ ಹಾಗೂ ಸುಟ್ಟ ಗಾಯಗಳಿಂದ ನರಾಳಾಡುತ್ತಿರುವ ದೃಶ್ಯ ಕಂಡಬಂದಿದೆ. ಗಾಯಾಳಯಗಳನ್ನು ಸಂಜಯ್ ಗಾಂಧಿ, ರಾಜೀವ್ ಗಾಂಧಿ ಆಸ್ಪತ್ರೆ ಸೇರಿದಂತೆ ಇತರೆ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಸಿಲಿಂಡರ್ ಲೀಕ್ ಆಗಿ ಕೆಮಿಕಲ್ ರಿಯಾಕ್ಷನ್ ಆಗಿ ಈ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಘಟನಾ ಸ್ಥಳಕ್ಕೆ ಆಡುಗೊಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಸಿಎಂಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಕಮಿಷನರ್ ಕೂಡ ಸ್ಪೋಟದ ಬಗ್ಗೆ ಸಿಎಂಗೆ ವಿವರ ನೀಡಿದರು. ಸ್ಥಳವನ್ನು ಇಂಚಿಂಚೂ ಪರಿಶೀಲಿಸಿದ ಸಿಎಂ, ಯಾವ ವಸ್ತುವಿನಿಂದ ಸ್ಫೋಟ ಸಂಭವಿಸಿದೆ ಎನ್ನುವ ಬಗ್ಗೆ ಮಾಹಿತಿ ಪಡೆದರು. ನಿಖರ ಕಾರಣ ಪತ್ತೆ ಹಚ್ಚುವಂತೆ ಪೊಲೀಸರಿಗೆ ಮತ್ತು ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ.