ಸ್ವಾತಂತ್ರ್ಯ ಎಂಬ ಪದವನ್ನು ಸಾಮಾನ್ಯವಾಗಿ ನಾವೆಲ್ಲರೂ ಬಳಸುತ್ತೇವೆ. ನಾವು ಕಾಣುವ ಅಥವಾ ಬಯಸುವ ಸ್ವಾತಂತ್ರ್ಯದ ಕಲ್ಪನೆ ಒಬ್ಬರಿಂದ ಒಬ್ಬರಲ್ಲಿ ಭಿನ್ನವಾಗಿರುತ್ತದೆ. ಬೆಳೆದ ಮಕ್ಕಳು ಅಪ್ಪ ಅಮ್ಮನ ಪ್ರಶ್ನಿಸುವ ಬಂಧನದಿಂದ ಸ್ವಾತಂತ್ರ ಬಯಸುತ್ತಾರೆ. ಪಂಜರದಲ್ಲಿ ಬಂಧಿಯಾದ ಹಕ್ಕಿ ಕಬ್ಬಿಣದ ಸರಳುಗಳಿಂದ ಬಿಡುಗಡೆಯ ಸ್ವಾತಂತ್ರ್ಯ ಬಯಸುತ್ತದೆ. ಹೆಂಡತಿ ಗಂಡನಿಂದ ಸ್ವಾತಂತ್ರ ಬಯಸುತ್ತಾಳೆ. ಗಂಡ ಹೆಂಡತಿಯಿಂದ ಸ್ವಾತಂತ್ರ್ಯ ಬಯಸುತ್ತಾನೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸ್ವಾತಂತ್ರ್ಯ ಬೇಕಿರುತ್ತದೆ. ಸ್ವಾತಂತ್ರ್ಯ ಎಂದರೆ ತನ್ನ ಇಚ್ಛೆಯಂತೆ ಬದುಕುವುದೇ ಅಥವಾ ತನ್ನಂತೆಯೇ ಮತ್ತೊಬ್ಬರ ಬೆಳವಣಿಗೆ ಇಚ್ಛೆಯನ್ನು ಅರಿತು ಬದುಕುದೇ ?. ಸಾಮಾನ್ಯವಾಗಿ ಪ್ರತಿಯೊಬ್ಬರು ಸ್ವಾತಂತ್ರ್ಯವನ್ನು ಬಯಸುತ್ತಾರೆ. ಭೂಮಿ ಮೇಲೆ ಜೀವಿಸುವ ಪ್ರತಿಯೊಂದು ಜೀವಿ ಕೂಡ ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತದೆ. ಗಿಳಿ ಮರಿಯೊಂದನ್ನು ಪಂಜರದಲ್ಲಿ ಬಂಧಿಸಿಟ್ಟರೆ ಅದು ಮಾಲೀಕನಿಗೆ ಸಂತೋಷ ಕೊಡಬಹುದು ಆದರೆ ಗಿಳಿ ಮರಿಗೆ ಅದು ಒಂದು ರೀತಿಯ ಕಬ್ಬಣದ ಜೈಲಿನಲ್ಲಿ ತನ್ನನ್ನು ಬಂಧಿಸಿದಂತೆ ಭಾಸವಾಗುತ್ತದೆ.
ಆ ಗಿಳಿ ಮರಿಯೂ ಬಿಡುಗಡೆಯ ಸ್ವಾತಂತ್ರ್ಯಕ್ಕಾಗಿ ತವಕಿಸುತ್ತಿರುತ್ತದೆ. ಹಾಗೆ ಯಾವುದೇ ಜೀವಿವೂ ಬಂಧನವನ್ನು ಇಷ್ಟ ಪಡುದಿಲ್ಲಾ, ಸ್ವಾತಂತ್ರವನ್ನು ಬಯಸುತ್ತದೆ. ಸ್ವಾತಂತ್ರ್ಯವು ಯಾವುದೋ ಘಟನೆಗಳಿಂದ ಓಡಿಹೋಗುದಲ್ಲ, ಬದಲಾಗಿ ಕೆಲವು ಪರಿಸ್ಥಿತಿ ಕೆಟ್ಟದೆನಿಸಿದರು ಅದರ ವಿರುದ್ಧ ಧ್ವನಿ ಎತ್ತುವುದು. ನಾವು ಯಾವುದೋ ಒಂದನ್ನು ಸ್ಟೀಕರಿಸುತ್ತೇವೊ ಇಲ್ಲವೋ , ಅದನ್ನು ಒಪ್ಪುತ್ತೇವೋ ಇಲ್ಲವೋ ಆದರೆ ನಮ್ಮ ಹೊರತಾಗಿ ಸಮಾಜದ ಇನ್ನೊಬ್ಬರಿಗೆ ಅದು ಒಪ್ಪುತ್ತದೆ ಎಂದಾದರೆ ಅದನ್ನು ಹತ್ತಿಕ್ಕುವ ಅಥವಾ ನಿರ್ಬಂಧಿಸುವ ಯಾವ ಅಧಿಕಾರವು ನಮಗಿಲ್ಲ. ಸ್ವಾತಂತ್ರ್ಯ ಎಂಬ ಹಕ್ಕು ನಾವು ಹೇಳುವಷ್ಟು, ಬಯಸುವಷ್ಟು ಸುಲಭವಾಗಿ ಸಿಗುವಂತದ್ದಾ ? ಖಂಡಿತಾ ಇಲ್ಲ. ಉದಾಹರಣಿಗೆ ಬ್ರಿಟಿಷರನ್ನೇ ತೆಗೆದುಕೊಳ್ಳಿ ಸಾವಿರಾರು ವರ್ಷಗಳ ಕಾಲ ನಮ್ಮ ಭವ್ಯ ಭಾರತವನ್ನು ಆಳಿದ ಪರಕೀಯರಿಗೆ ಭಾರತೀಯರಿಗೆ ಸ್ವಾತಂತ್ರ್ಯ ಕೊಡಬೇಕು ಎಂದು ಅನಿಸಿರಲಿಲ್ಲ. ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು ಕ್ರಮೇಣ ತಮ್ಮ ವಸಾಹಿತುಶಾಹಿತ್ವವನ್ನು ಸ್ಥಾಪಿಸಿದರು. ವರುಷಗಳ ಕಾಲ ನಮ್ಮ ಸಂಪತ್ತನ್ನು ದೋಚಿ ದೋಚಿ ಕೊಳ್ಳೆ ಹೊಡೆದರು, ನಾವು ಉಪವಾಸ ಹಿಡಿದು ಸತ್ಯಾಗ್ರಹ ಮಾಡಿದರು ಅವರಿಗೆ ನಾವು ಬಯಸುವ ಸ್ವಾತಂತ್ರ್ಯ ಕೂಡಬೇಕು ಎಂದು ಅನಿಸಿರಲಿಲ್ಲ. ಕೊಡುವ ಕಲ್ಪನೆಯೂ ಬಹುಶಃ ಅವರಿಗೆ ಇರಲಿಕ್ಕಿಲ್ಲ.
ಕವಿ ಸಿದ್ದಲಿಂಗಯ್ಯನವರು ತಮ್ಮ ಕವಿತೆಗಳಲ್ಲಿ ಹೇಳುವಂತೆ ಯಾರಿಗೆ ಬಂತು ಎಲ್ಲಿಗೆ ಬಂತು ಸ್ವಾತಂತ್ರ್ಯ ಎಂಬಂತೆ , ಸ್ವಾತಂತ್ರ್ಯ ಬಂದದ್ದು ಉಳ್ಳವರಿಗೋ ಅಥವಾ ಇಲ್ಲದವರಿಗೋ ಎಂಬ ಪ್ರಶ್ನೆಗೆ ನಾವೆ ಉತ್ತರ ಕಂಡುಕೊಳ್ಳಬೇಕು .
ಸ್ವಾತಂತ್ರ್ಯ ಎಂದರೆ ಕೇವಲ ದೇಶವನ್ನು ಬ್ರಿಟಿಷರ ಆಳ್ವಿಕೆಯಿಂದ ಮುಕ್ತಗೊಳಿಸುವುದು ಮಾತ್ರವಲ್ಲ. ಅದು ಜನರ ಮನಸ್ಸು, ಚಿಂತನೆ ಮತ್ತು ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಮುಕ್ತತೆಯನ್ನು ತರುವುದೇ ಆಗಿದೆ.
ಸಾವಿರಾರು ವರುಷಗಳ ಸಮೃದ್ಧ ಇತಿಹಾಸವಿರುವ ಪುಣ್ಯಭೂಮಿ ಭಾರತ . ಭಾರತ ಬಡ ದೇಶ ಎನ್ನಬೇಡಿ. ಅದು ಬಡವಾಗಿದ್ದರೆ ಜಗತ್ತಿನ ಸಂಪದ್ಭರಿತ ದೇಶವೆಂದು ಬ್ರೀಟಿಷರು ಹಾಗೂ ಇತರರೂ ಬರುತ್ತಲೇ ಇರಲಿಲ್ಲ. ಹಿಂದೆ ಹಲವಾರು ರಾಜ ಸಂಸ್ಥಾನಗಳನ್ನು ಒಳಗೊಂಡು ರಾಜರಿಂದ ಆಳಲ್ಪಡುತ್ತಿದ್ದ ಶ್ರೀಮಂತ ದೇಶ ಅದುವೇ ನಮ್ಮ ಭಾರತ. ಭಾರತ ಮಾತೆ ಕೋಟಿ ದೇವತೆಗಳ ತಾಯಿ, ಹಿಮಾಲಯವೇ ಅವಳ ಕೀರಿಟ, ಕಾಶ್ಮೀರವೇ ಅವಳ ಭುಜಬಲ, ಗಂಗೆ, ಯಮುನೆಯರೆ ಅವಳ ಹೃದಯ. ಒಮ್ಮೆ ಚೀನಾದ ಯಾತ್ರಿಕನೊಬ್ಬ ಭಾರತವನ್ನು ಹೊಗಳಿದ್ದು ಹೀಗೆ “ಕಣ್ಣುಗಳು ನೋಡಿಲ್ಲ, ಕಿವಿಗಳು ಕೇಳಿಲ್ಲ, ವಿಜಯನಗರದಷ್ಟು ಸಂಪತ್ತಿರುವ ನಗರ ಜಗತ್ತಿನಲ್ಲೇ ಇಲ್ಲ”. ಎಂದು ಅಂದು ಮುತ್ತು, ರತ್ನ, ಚಿನ್ನಗಳನ್ನು ಸಂತೆಯಲ್ಲಿ ಸೇರುಗಳಲ್ಲಿ ಮಾರುವುದನ್ನು ನೋಡಿ ಅವರು ಭಾರತವನ್ನು ಬಣ್ಣಿಸಿದ್ದರು.
ಭಾರತದಲ್ಲಿ ಆ ಕಾಲದಲ್ಲೇ ಮಹಾರಾಜ ನವಾಬರ ಹಾಗೂ ಇತರರ ಒಳಜಗಳಗಳೂ ನಡೆಯುತ್ತಲೆ ಇದ್ದವು. ಇದೇ ಸಂದರ್ಭದಲ್ಲಿ ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು ಇಲ್ಲಿನ ಪರಿಸ್ಥಿತಿ ಕಂಡು ಭಾರತೀಯ ರಾಜರುಗಳನ್ನು ಸುಲಭವಾಗಿ ಗೆದ್ದರು. ನಂತರ ತಮ್ಮದೇ ಆದ ಕಾನೂನುಗಳನ್ನು ಸ್ಥಾಪಿಸಿದರು.
1857 ರಲ್ಲಿ ಬ್ರಿಟಿಷರ ವಿರುದ್ಧ ಮಹಾ ಸಿಪಾಯಿ ದಂಗೆ ಪ್ರಾರಂಭವಾಯಿತು ಇದು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿಯಾಯಿತು. ಬ್ರೀಟಿಷರ ದಬ್ಬಾಳಿಕೆ ಎಷ್ಟರ ಮಟ್ಟಿಗೆ ಇತ್ತೆಂದರೆ ವಂದೇ ಮಾತರಂ ಗೀತೆಯನ್ನು ಹಾಡಿದರು ಸಹ ಅವರ ಗುಂಡಿನ ಎಟಿಗೆ ಬಲಿಯಾಗಬೇಕಿತ್ತು . ಆದರೆ ಭಾರತೀಯರಿಗೆ ಅದು ಕೇವಲ ಗೀತೆಯಾಗಿರಲಿಲ್ಲಾ ಅದು ಸ್ವಾತಂತ್ರ್ಯದ ಸಮರ್ಪಣ ಮಂತ್ರವಾಗಿತ್ತು.ಬ್ರಿಟಿಷರ ಗುಂಡಿನ ಎಟಿಗೆ ಅಂದು ಬಲಿಯಾದವರು ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರು , ಅಮಾಯಕ ಜನರು . ಅಂದು ಬ್ರಿಟಿಷ್ ಸರ್ಕಾರ ನೀಡಿದ ಸಾವಿನ ಸಂಖ್ಯೆ ವಿರಳವಾಗಿರಬಹುದು ಆದರೆ ಜಲಿಯನ್ ವಾಲಾಬಾಗ್ ನಲ್ಲಿ ರಕ್ತಗತವಾಗಿದ್ದ ಮಣ್ಣು ಹೇಳಿದ್ದವು ಸಾವಿನ ಸಂಖ್ಯೆ ಎಷ್ಟೆಂದು. 1858ರ ಸುಮಾರಿಗೆ ಭಾರತ ಸರ್ಕಾರದ ಕಾಯಿದೆ ಬ್ರಿಟಿಷ್ ಕ್ರೌನ್ ಭಾರತದ ನೇರ ನಿಯಂತ್ರಣ ವಹಿಸಿಕೊಳ್ಳಳು ಕಾರಣವಾಯಿತು. ಆ ದಶಕದಲ್ಲಿ ನೀತಿ, ಭೂ ಸುಧಾರಣಾ ಕಾಯ್ದೆಗಳನ್ನು ಕ್ರಮೇಣ ಬ್ರೀಟಿಷರು ಶಾಸನಬದ್ಧಗೊಳಿಸಿದರು.
ಇದರ ಮಧ್ಯೆ ಉಪ್ಪಿನ ಸತ್ಯಾಗ್ರಹ, ದಂಡಿ ಸತ್ಯಾಗ್ರಹ, ಚಳುವಳಿಗಳು, ಕ್ರಾಂತಿಕಾರಿಗಳು ಹೋರಾಟಗಳು ನಡೆದವು. ಬ್ರಿಟನ್ ಲೇಬರ್ ಸರ್ಕಾರ ಮುಂದುವರಿಸಲು ಸಾಧ್ಯವಾಗದೇ, ಲೇಬರ್ ಪಕ್ಷ ಆಡಳಿತಕ್ಕೆ ಬಂದ ಮೇಲೆ ಜಿನ್ನಾರವರ ಹಟದಿಂದ ಭಾರತಕ್ಕೆ ಸ್ವಾತಂತ್ಯದ ಭರವಸೆ ಮೂಡಿತು. 1947 ರ ಮಧ್ಯರಾತ್ರಿಯಲ್ಲಿ ಜಗತ್ತು ಮಲಗಿರುವಾಗ ಭಾರತವು ಸ್ವಾತಂತ್ರ್ಯದಿಂದ ಎಚ್ಚರಗೊಂಡಿತ್ತು. ಅಂದು ಮಹಾತ್ಮರ ತ್ಯಾಗ ,ಬಲಿದಾನಗಳು ಮಾರ್ದನಿಸಿದ್ದವು. ಅಂದು ಪ್ರಧಾನಿಯಾಗಿ ಜವಹರ್ ಲಾಲ್ ನೆಹರೂ ಅಧಿಕಾರ ಸ್ವೀಕರಿಸಿದರು .ಅ೦ತು ಭಾರತಾಂಬೆ ಬ್ರೀಟಿಷರ ದಾಸ್ಯದ ಸಂಕೋಲೆಗಳಿಂದ ಬಿಡುಗಡೆ ಹೊಂದಿದ ದಿನ . ಮಧ್ಯರಾತ್ರಿ ಸ್ವಾತಂತ್ರ್ಯದ ಘಂಟೆ ಭಾರಿಸುತ್ತಲೇ ಭಾರತ ಹೊಸ ಮನ್ವಂತರಕ್ಕೆ ಸಾಕ್ಷಿಯಾಯಿತು.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹೇಳುವಂತೆ , ಸಾಮಾಜಿಕ ಆರ್ಥಿಕ ‘ ಶೈಕ್ಷಣಿಕ , ಸಮಾನತೆ , ನಿಜವಾದ ಸ್ವಾತಂತ್ಯ ಅದು ಪ್ರತಿಯೊಬ್ಬ ಪ್ರಜೆಗೂ ಲಭಿಸದ ಹೊರತು ನಿಜವಾದ ಸ್ವಾತಂತ್ರ್ಯ ದೊರಕಿದಂತಲ್ಲಾ.
ವಿದೇಶಿ ವ್ಯಾಪಾರಿಗಳು ಇಲ್ಲಿ ಬಂದು ವ್ಯಾಪಾರ ಮಾಡುತ್ತಿದ್ದರು. ಆದರೆ ಆರ್ಥಿಕ ಸಂಪತ್ತು, ಸಂಪನ್ಮೂಲಗಳು ಮತ್ತು ಸಾಂಸ್ಕೃತಿಕ ವೈಭವವು ವಿದೇಶಿ ಶಕ್ತಿಗಳನ್ನು ಆಕರ್ಷಿಸಿತು. ಮೊದಲು ಮುಘಲ್ ಸಾಮ್ರಾಜ್ಯ ಮತ್ತು ನಂತರ ಬ್ರಿಟಿಷ್ ಆಳ್ವಿಕೆ ಭಾರತವನ್ನು ತನ್ನ ಹಿಡಿತಕ್ಕೆ ತಂದುಕೊಂಡಿತು.
ಬ್ರಿಟಿಷರ ಆಳ್ವಿಕೆಯಲ್ಲಿ ಭಾರತೀಯರು ಅನೇಕ ಅನ್ಯಾಯಗಳನ್ನು ಅನುಭವಿಸಿದರು – ಭೂಮಿಯ ತೆರಿಗೆ ಹೆಚ್ಚಳ, ಕೈಗಾರಿಕೆಗಳ ನಾಶ, ವಿದೇಶಿ ವಸ್ತುಗಳ ಬಲವಂತದ ಬಳಕೆ, ಮತ್ತು ಸಾಮಾಜಿಕ, ರಾಜಕೀಯ ಹಕ್ಕುಗಳ ನಿರಾಕರಣೆ. ಈ ಅನ್ಯಾಯದ ವಿರುದ್ಧ ಅನೇಕ ಜನರು ಹೋರಾಟ ಆರಂಭಿಸಿದರು .
1947ರ ಆಗಸ್ಟ್ 15ರಂದು ಭಾರತವು ಪಡೆದ ಸ್ವಾತಂತ್ರ್ಯವು, ನಮ್ಮ ಪೀಳಿಗೆಗೆ ಅನೇಕ ಕನಸುಗಳ ಬಾಗಿಲು ತೆರೆಯಿತು. ಆದರೆ, ಸ್ವಾತಂತ್ರ್ಯವು ಒಂದು ಅಂತಿಮ ಗುರಿಯಲ್ಲ ಅದು ಒಂದು ಹೊಸ ಪ್ರಯಾಣದ ಪ್ರಾರಂಭ.
ಸ್ವಾತಂತ್ರ್ಯದ ಬೆಳಕು, ನಮ್ಮ ಭವಿಷ್ಯವನ್ನು ಬೆಳಗುವ ದೀಪವಾಗಿರಬೇಕು. ಅದು ಅಜ್ಞಾನ, ಬಡತನ, ಅಸಮಾನತೆ, ಅನ್ಯಾಯ ಇವುಗಳನ್ನು ತೊಡೆದುಹಾಕುವ ಶಕ್ತಿ ಹೊಂದಿರಬೇಕು.ಗಾಂಧೀಜಿಯವರು ಹೇಳಿದಂತೆ, “ಸ್ವಾತಂತ್ರ್ಯವು ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ನಡೆದು ಸಾಧಿಸಿದಾಗ ಮಾತ್ರ ಶಾಶ್ವತವಾಗಿರುತ್ತದೆ”. ಇಂದಿನ ಪೀಳಿಗೆಗೆ ಸ್ವಾತಂತ್ರ್ಯವು ಕೇವಲ ಆಚರಣೆಗಳಲ್ಲ, ಅದು ಪ್ರತಿ ದಿನದ ಜೀವನದಲ್ಲಿ ಅನುಸರಿಸಬೇಕಾದ ಮೌಲ್ಯವಾಗಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯೊಳಗೆ ನಾವು ನಮ್ಮ ಹಕ್ಕು ಕರ್ತವ್ಯಗಳನ್ನು ಅರಿತು, ರಾಷ್ಟ್ರದ ಅಭಿವೃದ್ಧಿಗೆ ಕೈಜೋಡಿಸಿದಾಗ ಮಾತ್ರ, ಸ್ವಾತಂತ್ರ್ಯದ ನಿಜವಾದ ಅರ್ಥ ಮೂಡುತ್ತದೆ.
ಇಂದಿನ ಸಮಾಜಕ್ಕೆ ಸ್ವಾತಂತ್ರ್ಯ ಎಂದರೆ ಕೇವಲ ಭಾಷಣಗಳಲ್ಲಿ ಕೇಳುವ ಇತಿಹಾಸವಲ್ಲ ಅದು ಹೊಣೆಗಾರಿಕೆಯ ಒಂದು ಸಂಕೇತ. ದೇಶದ ಸಂಪನ್ಮೂಲಗಳನ್ನು ಸಂರಕ್ಷಿಸುವುದು, ಪರಿಸರವನ್ನು ಕಾಪಾಡುವುದು, ವಿಜ್ಞಾನ-ತಂತ್ರಜ್ಞಾನದಲ್ಲಿ ಮುನ್ನಡೆ ಸಾಧಿಸುವುದು ಮತ್ತು ಸಾಮಾಜಿಕ ಸಾಮರಸ್ಯವನ್ನು ಬೆಳೆಸುವುದು ನಮ್ಮ ಕರ್ತವ್ಯ.
ಇಂದು ನಾವು ಸ್ವಾತಂತ್ರ್ಯ ಸಿಕ್ಕಿ 78 ವರ್ಷ ಕಳೆದರೂ ದೇಶದಲ್ಲಿ ಇನ್ನೂ ಅನೇಕ ಸಮಸ್ಯೆಗಳಿವೆ . ನಾವಿಂದು ಕುಳಿತಲ್ಲೇ ಜಗತ್ತನ್ನು ನೋಡುವಷ್ಟು ಮುಂದುವರೆದಿದ್ದೇವೆ . ಆದರೆ ಕೆಲವು ಭಾಗಗಳಿಗೆ ಇಂದಿಗೂ ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲಾ, ವಿದ್ಯುತ್ ಸಂಪರ್ಕ ಇಲ್ಲಾ. ಇಂಟರ್ನೆಟ್ ಸೌಲಭ್ಯ ಇಲ್ಲಾ. ನಾವು ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರೆದಿದ್ದೆ ಆದರೆ ಮೂಲಭೂತ ಅವಶ್ಯಕತೆಗಳಲ್ಲಿ ಹಿಂದುಳಿದಿದ್ದೇವೆ. ಅದೇನೆ ಇರಲಿ ನಮ್ಮ ಹಿರಿಯರು ಕೊಟ್ಟ ಈ ಸ್ವಾತಂತ್ರ್ಯವನ್ನು ನಾವು ಗೌರವಿಸಬೇಕು. ಸಮಾಜದಲ್ಲಿ ಒಬ್ಬರು ಇನ್ನೂಬ್ಬರನ್ನು ಅರಿತು ಬಾಳಿದಾಗ ಆ ಗಾಂಧಿ ಕಲ್ಪನೆಯ ರಾಮರಾಜ್ಯ ನಮ್ಮದಾಗುವುದು.
ಸ್ವಾತಂತ್ರ್ಯದ ಬೆಳಕನ್ನು ಕಾಪಾಡಿ ಬೆಳಗಿಸುವುದು, ನಾವೆಲ್ಲರೂ ಸೇರಿ ನಿರ್ಮಿಸಬೇಕಾದ ಭವಿಷ್ಯದ ದಾರಿ. ಏಕತೆ, ಶಾಂತಿ ಮತ್ತು ಪ್ರಗತಿಯ ಮೂಲಕ ಮಾತ್ರ, ಆ ಬೆಳಕು ಮುಂದಿನ ಪೀಳಿಗೆಯ ಹೃದಯಗಳಲ್ಲಿ ಬೆಳೆಗುತ್ತದೆ.ಸ್ವಾತಂತ್ರ್ಯ ಸ್ವಚ್ಛೇಚಾರವಲ್ಲಾ , ಅದನ್ನು ನಾವು ಕೇವಲ ಸಂಭ್ರಮಿಸದೆ, ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮ ಹೊಣೆ.
ನಿಜವಾದ ಸ್ವಾತಂತ್ರ್ಯವೆಂದರೆ, ಪ್ರತಿ ಭಾರತೀಯನ ಹೃದಯದಲ್ಲಿ ಕನಸು, ಕಣ್ಣಲ್ಲಿ ಬೆಳಕು, ಕೈಯಲ್ಲಿ ಕೆಲಸ, ಮತ್ತು ಮನಸ್ಸಿನಲ್ಲಿ ಪ್ರೀತಿ ತುಂಬಿರುವ ಸ್ಥಿತಿ. ಅದು ಬಂದಾಗ ಮಾತ್ರ, ಸ್ವಾತಂತ್ರ್ಯದ ಬೆಳಕು ನಮ್ಮ ಭವಿಷ್ಯದ ದಾರಿಯನ್ನು ಬೆಳಗುತ್ತದೆ.
̲-ಸುಜಯ ಶೆಟ್ಟಿ , ಹಳ್ನಾಡು



















