ಬೆಂಗಳೂರು : ಸಾಹಸಸಿಂಹ ವಿಷ್ಣುವರ್ಧನ್ ಸಮಾಧಿ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಹಿರಿಯ ನಟ ರಮೇಶ್ ಭಟ್ ವಿಡಿಯೋ ಸಂದೇಶದ ಮೂಲದ ಬೇಸರ ವ್ಯಕ್ತಪಡಿಸಿದ್ದಾರೆ.
ಇದೊಂದು ದೊಡ್ಡ ದುರಂತ. ಹೀಗಾಗಬಾರದಿತ್ತು. ಒಬ್ಬ ಶ್ರೇಷ್ಠ ನಟನಿಗೆ ದೊರಕಬೇಕಾದ ಸ್ಥಾನಮಾನ ಯಾವುದು ದೊರಕಿಲ್ಲ. ಈ ಘಟನೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ. ದೇವರನ್ನು ನೋಡುವುದಕ್ಕೆ ಅವರು ಇದ್ದಲ್ಲಿಗೆ ಹೋಗಬೇಕಲ್ವೇ ? ಪ್ರತಿಯೊಬ್ಬರ ಮನೆಯಲ್ಲೂ ದೇವರ ಫೋಟೋ ಇರುತ್ತದೆ. ಆದರೂ ನಾವು ದೇಗುಲಕ್ಕೆ ಹೋಗಿ ದರ್ಶನ ಪಡೆದು ಕೈ ಮುಗಿದು ಬರುತ್ತೇವೆ. ಅಭಿಮಾನಿಗಳ ಭಾವನೆಗೆ ಧಕ್ಕೆ ಉಂಟಾಗಿದೆ. ಯಾರಿಂದಲೂ ಇದನ್ನು ಸರಿ ಮಾಡುವುದಕ್ಕೆ ಸಾಧ್ಯವಿಲ್ಲ ಎನ್ನುವುದು ನನ್ನ ಭಾವನೆ. ಕಾನೂನಿಗೆ ಕರುಣೆ ಇಲ್ಲ. ಎಲ್ಲರೂ ತಲೆ ಬಾಗಲೇಬೇಕು ಎಂದು ಭಾವುಕವಾಗಿ ನುಡಿದಿದ್ದಾರೆ.
ಇಷ್ಟು ದಿನ ಈ ಜಾಗಕ್ಕೆ ಹೋರಾಡಿದ ಅಭಿಮಾನಿಗಳ ಗುಂಪೇ ಇನ್ನೊಂದು ಪ್ರಯತ್ನ ಮಾಡಬಹುದು. ಜಾಗದ ಮಾಲಿಕರ ಮನವೊಲಿಸುವ ಕಾರ್ಯ ಮಾಡಬಹುದು ಎಂದೂ ಅವರು ಸಲಹೆ ನೀಡಿದ್ದಾರೆ.


















