ಬೆಂಗಳೂರು: ಪದೇಪದೆ ಫಾಸ್ಟ್ಯಾಗ್ ರಿಚಾರ್ಜ್ ಮಾಡುವ, ಎಲ್ಲಿಗಾದರೂ ಹೊರಡುವಾಗ ಫಾಸ್ಟ್ಯಾಗ್ ನಲ್ಲಿ ಎಷ್ಟು ಹಣವಿದೆ ಎಂದು ಚೆಕ್ ಮಾಡುವ, ಟೋಲ್ ಪ್ಲಾಜಾ ಬಳಿಯೇ ರಿಚಾರ್ಜ್ ಮಾಡಿಕೊಳ್ಳುವ ಧಾವಂತ ಆಗಸ್ಟ್ 15ರಿಂದ ಇರುವುದಿಲ್ಲ. ಏಕೆಂದರೆ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ವು ಆಗಸ್ಟ್ 15ರಿಂದ ಫಾಸ್ಟ್ಯಾಗ್ ಪಾಸ್ ಗಳನ್ನು ನೀಡುತ್ತಿದ್ದು, ಇದರಿಂದ ವರ್ಷದಲ್ಲಿ 200 ಬಾರಿ ಟೋಲ್ ಪ್ಲಾಜಾಗಳ ಮೂಲಕ ಸಾಗಬಹುದಾಗಿದೆ. ಅಲ್ಲದೆ, ಪಾಸ್ ಬಳಸುವ ಮೂಲಕ ವರ್ಷಕ್ಕೆ 7 ಸಾವಿರ ರೂಪಾಯಿ ಉಳಿತಾಯ ಮಾಡಬಹುದು.
7 ಸಾವಿರ ರೂ. ಉಳಿತಾಯ ಹೇಗೆ?
ಕೇಂದ್ರ ಸರ್ಕಾರವು ಒಂದು ವರ್ಷದ ಫಾಸ್ಟ್ಯಾಗ್ ರಿಚಾರ್ಜ್ ಪಾಸಿನ ಶುಲ್ಕವನ್ನು 3 ಸಾವಿರ ರೂಪಾಯಿ ಎಂದು ನಿಗದಿಪಡಿಸಲಾಗಿದೆ, ಈ ಪಾಸ್ ಬಳಸುವ ಮೂಲಕ 200 ಟೋಲ್ ಕ್ರಾಸಿಂಗ್ ಗಳನ್ನು ಮಾಡಬಹುದು. ಈ ಪಾಸ್ ನ ಮಾನ್ಯತೆ ಒಂದು ವರ್ಷವಾಗಿರುತ್ತದೆ. ಅಂದರೆ, ಪ್ರತಿ ಟೋಲ್ ದಾಟಲು ಕೇವಲ 15 ರೂಪಾಯಿ ಶುಲ್ಕ ತಗಲುತ್ತದೆ.
ಪ್ರಸ್ತುತ ಟೋಲ್ ಗೇಟ್ ಗಳಲ್ಲಿ ವಾಹನದ ತೂಕಕ್ಕೆ ಅನುಗುಣವಾಗಿ ವಿವಿಧ ಶುಲ್ಕಗಳನ್ನು ವಿಧಿಸಲಾಗುತ್ತದೆ. ಈಗ 200 ಟೋಲ್ ಕ್ರಾಸಿಂಗ್ ಗಳಿಗೆ ಸುಮಾರು 10 ಸಾವಿರ ರೂಪಾಯಿ ಆಗಬಹುದು. ಆದರೆ ಪಾಸ್ ಹೊಂದಿದ್ದರೆ ನೀವು ಕೇವಲ 3 ಸಾವಿರ ರೂಪಾಯಿಯಲ್ಲಿ 200 ಟ್ರಿಪ್ ಹೋಗಬಹುದು. ಇದರಿಂದ ಕನಿಷ್ಠ 7 ಸಾವಿರ ರೂಪಾಯಿ ಉಳಿತಾಯವಾಗುತ್ತದೆ.
ಪಾಸ್ ಪಡೆಯೋದು ಹೇಗೆ?
ಮೊದಲಿಗೆ ನೀವು ರಾಜಮಾರ್ಗ ಯಾತ್ರ ಅಥವಾ ಹೆದ್ದಾರಿ ಪ್ರಾಧಿಕಾರದ ವೆಬ್ ಸೈಟ್ ಗೆ ಭೇಟಿ ನೀಡಬೇಕು
ವೆಹಿಕಲ್ ನಂಬರ್ ಹಾಗೂ ಫಾಸ್ಟ್ಯಾಗ್ ಐಡಿ ನಮೂದಿಸಬೇಕು
ಯುಪಿಐ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ 3 ಸಾವಿರ ರೂ. ಪಾವತಿಸಬೇಕು
ಕೂಡಲೇ ನಿಮ್ಮ ಫಾಸ್ಟ್ಯಾಗ್ ಗೆ ಪಾಸ್ ಲಿಂಕ್ ಆಗುತ್ತದೆ. ಇದರ ಕುರಿತು ನಿಮಗೊಂದು ಮೆಸೇಜ್ ಬರುತ್ತದೆ


















