ಬೆಂಗಳೂರು: ದೇಶದಲ್ಲಿ ಆರು ದಶಕಗಳ ಹಿಂದಿನಿಂದ ಜಾರಿಯಲ್ಲಿದ್ದ ಆದಾಯ ತೆರಿಗೆ ಕಾಯ್ದೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. 1961ರ ಆದಾಯ ತೆರಿಗೆ ಕಾಯ್ದೆ ಬದಲಾಗಿ, ಹಲವು ಮಾರ್ಪಾಡುಗಳು ಇರುವ ನೂತನ ಆದಾಯ ತೆರಿಗೆ ವಿಧೇಯಕಕ್ಕೆ ಅಂಗೀಕಾರವೂ ದೊರೆತಿದೆ. ಇದರ ಬೆನ್ನಲ್ಲೇ, ನೂತನ ಆದಾಯ ತೆರಿಗೆ ಕಾಯ್ದೆ ಜಾರಿಯಾದರೆ, ಆದಾಯ ತೆರಿಗೆ ಸ್ಲ್ಯಾಬ್ ಗಳಲ್ಲಿ ಬದಲಾವಣೆಯಾಗುತ್ತದೆಯೇ ಎಂಬ ಗೊಂದಲಗಳು ಮೂಡಿವೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಮಹತ್ವದ ಸ್ಪಷ್ಟನೆ ನೀಡಿದೆ.
ಕೇಂದ್ರ ಸರ್ಕಾರ ನೀಡಿದ ಮಾಹಿತಿ ಪ್ರಕಾರ, ನೂತನ ತೆರಿಗೆ ಕಾಯ್ದೆ ಜಾರಿಗೆ ಬಂದರೂ ಆದಾಯ ತೆರಿಗೆ ಸ್ಲ್ಯಾಬ್ ಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈಗಿರುವ 12 ಲಕ್ಷ ರೂಪಾಯಿವರೆಗಿನ ಆದಾಯ ತೆರಿಗೆ ವಿನಾಯಿತಿ ನಿಯಮಗಳೇ ಮುಂದುವರಿಯಲಿವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಹಾಗಾಗಿ, ಆದಾಯ ತೆರಿಗೆ ವಿನಾಯಿತಿಯ ಲಾಭ ಪಡೆಯುವವರಿಗೆ ನೂತನ ಕಾಯ್ದೆ ಅನ್ವಯ ಯಾವುದೇ ಸಮಸ್ಯೆಯಾಗುವುದಿಲ್ಲ.
ನೂತನ ತೆರಿಗೆ ಕಾಯ್ದೆ ಮೂಲಕ ಆದಾಯ ತೆರಿಗೆಗೆ ಸಂಬಂಧಿಸಿದ ನಿಬಂಧನೆಗಳನ್ನು ಸರಳಗೊಳಿಸಲಾಗಿದೆ. ಸುಮಾರು 5 ಲಕ್ಷ ಇದ್ದ ಪದಗಳನ್ನು 2.6 ಲಕ್ಷಕ್ಕೆ ಇಳಿಸುವ ಮೂಲಕ, ಕಾಯ್ದೆಯನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವ ಹಾಗೆ ಮಾಡಲಾಗಿದೆ. ಅಲ್ಲದೆ, ನಿಗದಿತ ದಿನಾಂಕದ ನಂತರ ಐಟಿಆರ್ ಸಲ್ಲಿಸಿದರೆ ಮರುಪಾವತಿಯನ್ನು ನಿರಾಕರಿಸುವ ನಿಬಂಧನೆಯನ್ನು ತೆಗೆದುಹಾಕಲಾಗುತ್ತದೆ.
ಹಳೆಯ ಕಾಯ್ದೆಯಲ್ಲಿ, ನಿಗದಿತ ದಿನಾಂಕದೊಳಗೇ ಐಟಿಆರ್ ಅನ್ನು ಸಲ್ಲಿಸಬೇಕಿತ್ತು. ಈ ನಿಯಮದಲ್ಲಿ ಕೇಂದ್ರ ಸರ್ಕಾರವೀಗ ಬದಲಾವಣೆ ಮಾಡುತ್ತಿದೆ. ಅಲ್ಲದೆ, ತೆರಿಗೆದಾರರಿಗೆ ‘ಶೂನ್ಯ’ (ನಿಲ್) ಟಿಡಿಎಸ್ ಪ್ರಮಾಣಪತ್ರವನ್ನು ಪಡೆಯಲು ಕೂಡ ಅವಕಾಶ ನೀಡಲಾಗಿದೆ. ಇದರ ಜತೆಗೆ ಮನೆ ಆಸ್ತಿಯಿಂದ ಲಭಿಸುವ ಆದಾಯದ ಮೇಲಿನ ಸ್ಟಾಂಡರ್ಡ್ ಡಿಡಕ್ಷನ್ ಮಿತಿ ನಿಗದಿ ಸೇರಿ ಹಲವು ಬದಲಾವಣೆಯನ್ನು ಮಾಡಿದೆ.



















