ತಿರುವನಂತಪುರಂ: ಕೇರಳದ ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ, ಮಹಿಳೆಯೊಬ್ಬರ ವಿಳಾಸವನ್ನು ಬಳಸಿ ಅವರ ಅರಿವಿಗೆ ಬಾರದಂತೆ 9 ನಕಲಿ ಮತಗಳನ್ನು ಸೇರಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ತ್ರಿಶೂರ್ ಕ್ಷೇತ್ರವು 2024ರ ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಬಿಜೆಪಿ ಗೆದ್ದ ಏಕೈಕ ಸ್ಥಾನವಾಗಿದ್ದು, ಈ ಘಟನೆ ಇದೀಗ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳ ನಾಯಕರು ಮತಗಳ್ಳತನದ ಆರೋಪ ಮಾಡಿ, ಹೋರಾಟ ತೀವ್ರಗೊಳಿಸಿರುವಾಗಲೇ ಈ ಘಟನೆ ಬೆಳಕಿಗೆ ಬಂದಿರುವುದು ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.
ತ್ರಿಶೂರ್ ಜಿಲ್ಲೆಯ ಪೂಂಕುನ್ನಂನಲ್ಲಿರುವ ಕ್ಯಾಪಿಟಲ್ ವಿಲೇಜ್ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್ ಸಂಖ್ಯೆ 4ಸಿ ನಿವಾಸಿ ಪ್ರಸನ್ನ ಎಂಬವರು ಈ ಬಗ್ಗೆ ದೂರು ನೀಡಿದ್ದಾರೆ. ನನ್ನ ಮನೆಯಲ್ಲಿ ತ್ರಿಶೂರ್ ಕ್ಷೇತ್ರದಲ್ಲಿ ಮತ ಚಲಾಯಿಸುವ ಏಕೈಕ ವ್ಯಕ್ತಿ ನಾನು ಮಾತ್ರ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನಮ್ಮ ಕುಟುಂಬದಲ್ಲಿ ನಾಲ್ವರು ವಯಸ್ಕರು ಮತ್ತು ಇಬ್ಬರು ಮಕ್ಕಳಿದ್ದು, ಉಳಿದ ವಯಸ್ಕ ಸದಸ್ಯರು ತಮ್ಮ ಪೂರ್ವಜರ ಗ್ರಾಮವಾದ ಪೂಚಿನಿಪಾಡಂನಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಪ್ರಸನ್ನ ತಿಳಿಸಿದ್ದಾರೆ.
ಪರಿಶೀಲನೆಗಾಗಿ ಯಾರೋ ತಮ್ಮನ್ನು ಸಂಪರ್ಕಿಸಿದಾಗ ಮಾತ್ರ, ತಮ್ಮ ವಿಳಾಸದಲ್ಲಿ ಹೆಚ್ಚುವರಿಯಾಗಿ ಒಂಬತ್ತು ಹೆಸರುಗಳಿರುವುದು ಬೆಳಕಿಗೆ ಬಂದಿದೆ ಎಂದು ಅವರು ಹೇಳಿದರು.
“ಆ ಒಂಬತ್ತು ಜನರಲ್ಲಿ ಯಾರೊಬ್ಬರೂ ನಮಗೆ ತಿಳಿದಿಲ್ಲ. ನಾವು ಕಳೆದ ನಾಲ್ಕು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ನಮ್ಮ ಒಪ್ಪಿಗೆಯಿಲ್ಲದೆ ನಮ್ಮ ವಿಳಾಸಕ್ಕೆ ಹೆಸರುಗಳನ್ನು ಸೇರಿಸುವುದು ಸರಿಯಲ್ಲ” ಎಂದು ಹೇಳಿದ ಪ್ರಸನ್ನ, ಈ ಸಂಬಂಧ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿರುವುದಾಗಿ ಖಚಿತಪಡಿಸಿದ್ದಾರೆ.
ಸಿಪಿಎಂ ಮತ್ತು ಕಾಂಗ್ರೆಸ್ಸಿಂದ ತನಿಖೆಗೆ ಒತ್ತಾಯ
ಈ ಘಟನೆಯು ಕೇವಲ ಒಂದು ಫ್ಲ್ಯಾಟ್‌ಗೆ ಸೀಮಿತವಾಗಿಲ್ಲ ಎಂದು ಸಿಪಿಎಂ ಕಾರ್ಯಕರ್ತರು ಆರೋಪಿಸಿದ್ದಾರೆ. ಪೂಂಕುನ್ನಂನ ವಾಟರ್ ಲಿಲ್ಲಿ ಮತ್ತು ಕ್ಯಾಪಿಟಲ್ ವಿಲೇಜ್‌ನಂತಹ ಇತರ ಅಪಾರ್ಟ್‌ಮೆಂಟ್‌ಗಳಲ್ಲಿಯೂ ಇದೇ ರೀತಿಯ ಮತದಾರರ ಪಟ್ಟಿ ಅಕ್ರಮಗಳು ನಡೆದಿವೆ ಎಂದು ಅವರು ಹೇಳಿದ್ದಾರೆ. ಖಾಲಿ ಇರುವ ಫ್ಲ್ಯಾಟ್‌ಗಳ ವಿಳಾಸಗಳನ್ನು ಬಳಸಿ ಬೇರೆ ಜಿಲ್ಲೆಗಳಿಂದ ಮತಗಳನ್ನು ವರ್ಗಾಯಿಸಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಪ್ರತಿಪಕ್ಷದ ನಾಯಕ ವಿ.ಡಿ. ಸತೀಶನ್, ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಬಿಜೆಪಿ “ತಪ್ಪು ದಾರಿಯಲ್ಲಿ” ಮತಗಳನ್ನು ಸೇರಿಸಿ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣಾ ಪ್ರಕ್ರಿಯೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಚುನಾವಣಾ ಅಕ್ರಮಗಳ ಬಗ್ಗೆ ರಾಹುಲ್ ಗಾಂಧಿಯವರು ಬೆಳಕು ಚೆಲ್ಲಿದ್ದನ್ನು ಶ್ಲಾಘಿಸಿದ ಅವರು, ನಾಗರಿಕರು “ಫ್ಯಾಸಿಸಂ, ನಿರಂಕುಶಾಧಿಕಾರ ಮತ್ತು ಕೋಮುವಾದ”ವನ್ನು ವಿರೋಧಿಸಬೇಕು ಎಂದು ಕರೆ ನೀಡಿದರು.
ಸಿಪಿಎಂ ನಾಯಕ ಮತ್ತು ತ್ರಿಶೂರ್ ಮಾಜಿ ಅಭ್ಯರ್ಥಿ ವಿ.ಎಸ್. ಸುನಿಲ್ ಕುಮಾರ್ ಕೂಡ, ಮತದಾರರ ನೋಂದಣಿ ಸಂದರ್ಭದಲ್ಲಿ ಚುನಾವಣಾ ಆಯೋಗವು ವ್ಯಾಪಕ ಅಕ್ರಮಗಳಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿದ್ದಾರೆ. ಒಂದೇ ಬೂತ್ ನಲ್ಲಿ 280 ಅರ್ಜಿಗಳು ಒಟ್ಟಿಗೆ ಬಂದಿದ್ದವು ಮತ್ತು ಇತರ ಕ್ಷೇತ್ರಗಳ ಹಾಗೂ ವಲಸೆ ಕಾರ್ಮಿಕರ ಹೆಸರುಗಳನ್ನು ಸೇರಿಸಲಾಗಿತ್ತು ಎಂದು ಅವರು ದೂರಿದ್ದಾರೆ. ಅಂಚೆ ಕಾರ್ಡ್ ಅನ್ನು ವಿಳಾಸದ ಪುರಾವೆಯಾಗಿ ಬಳಸಿಕೊಂಡು ಮತದಾರರ ನೋಂದಣಿಗೆ ಅವಕಾಶ ನೀಡುವ ಮೂಲಕ ಚುನಾವಣಾ ಆಯೋಗವು ಪ್ರಕ್ರಿಯೆಯನ್ನು ಸಡಿಲಗೊಳಿಸಿದೆ ಎಂದು ಅವರು ಹೇಳಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ, ಎಲ್‌ಡಿಎಫ್‌ನ ಸುನಿಲ್ ಕುಮಾರ್ ಮತ್ತು ಯುಡಿಎಫ್‌ನ ಕೆ. ಮುರಳೀಧರನ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದರು. ಇದೀಗ ಕೇಳಿಬಂದಿರುವ ನಕಲಿ ಮತದಾನದ ಆರೋಪವು ಈ ಕ್ಷೇತ್ರದ ಚುನಾವಣಾ ಫಲಿತಾಂಶದ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.



















