ಬೆಂಗಳೂರು : ಕೆ.ಎನ್ ರಾಜಣ್ಣ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ವಿರೋಧ ಪಕ್ಷಗಳಿಗೆ ಹೊಸ ಅಸ್ತೃ ಸಿಕ್ಕಿದಂತಾಗಿದೆ. ಸದನದಲ್ಲಿ ವಾಗ್ದಾಳಿ ನಡೆಸಲು ಬಿಜೆಪಿ ನಾಯಕರು ಸಜ್ಜಾಗಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮಾಧ್ಯಮಗಳಿಗೆ ಸ್ಪಂದಿಸಿ ಮಾತನಾಡಿದ್ದಾರೆ.
ರಾಜಣ್ಣ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಮಾಪ್ತರು, ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡುವ ಯಾವ ಮಹಾ ಅಪರಾಧ ಮಾಡಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಸದನದಲ್ಲಿ ಚರ್ಚೆ ಆಗಬೇಕು. ಯಾವ ಕಾರಣಕ್ಕೆ ರಾಜಣ್ಣರನ್ನು ಕಿತ್ತೆಸೆಯಲಾಗಿದೆ? ರಾಷ್ಟ್ರದಲ್ಲಿ ಅಕ್ರಮವಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಚುನಾವಣಾ ಆಯೋಗಕ್ಕೆ ದೂರು ನೀಡದೆ ಪಲಾಯನ ಮಾಡಿದ್ದರು, ಸಿಎಂ ಅವರಿಂದ ನಾವು ಉತ್ತರ ಬಯಸುತ್ತೇವೆ. ಈ ಬಗ್ಗೆ ಸದನದಲ್ಲಿ ಸಿಎಂ ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ರಾಜಣ್ಣರ ವಜಾ ವಿಚಾರವನ್ನು ಎರಡೂ ಸದನದಲ್ಲಿ ಎತ್ತಿಕೊಳ್ಳುತ್ತೇವೆ. ಪರಿಶಿಷ್ಟ ಪಂಗಡದ ನಾಯಕನನ್ನು ಈ ರೀತಿ ನಡೆಸಿಕೊಳ್ಳುತ್ತಾರಾ ? ಎಂದು ಕಾಂಗ್ರೆಸ್ ಸರ್ಕಾರಕ್ಕೆ ಬಿವೈವಿ ಪ್ರಶ್ನೆ ಮಾಡಿದ್ದಾರೆ.