ಯಾಂಗೂನ್ (ಮ್ಯಾನ್ಮಾರ್): ಭಾರತದ ಮಹಿಳಾ ಫುಟ್‌ಬಾಲ್ ತಂಡವು 20 ವರ್ಷಗಳ ನಂತರ ಮೊದಲ ಬಾರಿಗೆ ಎಎಫ್‌ಸಿ 20 ವರ್ಷದೊಳಗಿನವರ ಏಷ್ಯನ್ ಕಪ್ ಫುಟ್‌ಬಾಲ್ ಟೂರ್ನಿಗೆ ಅರ್ಹತೆ ಪಡೆದಿದೆ. ಭಾನುವಾರ ನಡೆದ ಅರ್ಹತಾ ಸುತ್ತಿನ ‘ಡಿ’ ಗುಂಪಿನ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡವು ಮ್ಯಾನ್ಮಾರ್ ತಂಡವನ್ನು 1-0 ಗೋಲಿನಿಂದ ಮಣಿಸಿ ಈ ಐತಿಹಾಸಿಕ ಸಾಧನೆಗೈದಿದೆ.
ಪಂದ್ಯದ 27ನೇ ನಿಮಿಷದಲ್ಲಿ ಆಟಗಾರ್ತಿ ಪೂಜಾ ಬಾರಿಸಿದ ಏಕೈಕ ಗೋಲು ಭಾರತದ ಗೆಲುವಿಗೆ ನಿರ್ಣಾಯಕವಾಯಿತು. ಈ ಗೆಲುವಿನೊಂದಿಗೆ ಭಾರತ ತಂಡವು ಒಟ್ಟು ಏಳು ಅಂಕಗಳೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿ, 2026ರಲ್ಲಿ ಥಾಯ್ಲೆಂಡ್‌ನಲ್ಲಿ ನಡೆಯಲಿರುವ ಮುಖ್ಯ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡಿತು. ಭಾರತ ಕೊನೆಯ ಬಾರಿ 2006ರಲ್ಲಿ ಈ ಟೂರ್ನಿಗೆ ಅರ್ಹತೆ ಪಡೆದಿತ್ತು.
ಈ ಟೂರ್ನಿಯಲ್ಲಿ ಭಾರತದ ಮಹಿಳಾ ತಂಡದ ಪ್ರಯಾಣ ಗಮನಾರ್ಹವಾಗಿದೆ. ಆರಂಭಿಕ ಪಂದ್ಯದಲ್ಲಿ ಇಂಡೊನೇಷ್ಯಾದೊಂದಿಗೆ ಗೋಲುರಹಿತವಾಗಿ ಡ್ರಾ ಸಾಧಿಸಿದ್ದ ತಂಡ, ಎರಡನೇ ಪಂದ್ಯದಲ್ಲಿ ತುರ್ಕಮೆನಿಸ್ತಾನವನ್ನು 7-0 ಗೋಲುಗಳಿಂದ ಭರ್ಜರಿ ಜಯ ಸಾಧಿಸಿತ್ತು. ಈ ಭರ್ಜರಿ ಪ್ರದರ್ಶನವು ಅಂತಿಮವಾಗಿ ನಿರ್ಣಾಯಕ ಪಂದ್ಯಕ್ಕೆ ಬಲ ತುಂಬಿತು.
ಇನ್ನುಳಿದ ಅರ್ಹತಾ ಪಂದ್ಯಗಳಲ್ಲಿ, ಎ ಗುಂಪಿನಲ್ಲಿ ಉತ್ತರ ಕೊರಿಯಾ, ಬಿ ಗುಂಪಿನಲ್ಲಿ ವಿಯೆಟ್ನಾಂ, ಇ ಗುಂಪಿನಲ್ಲಿ ಚೀನಾ, ಎಫ್ ಗುಂಪಿನಲ್ಲಿ ಜಪಾನ್, ಎಚ್ ಗುಂಪಿನಲ್ಲಿ ಬಾಂಗ್ಲಾದೇಶ ಮತ್ತು ದಕ್ಷಿಣ ಕೊರಿಯಾ ತಂಡಗಳು ಸಹ ಟೂರ್ನಿಗೆ ಅರ್ಹತೆ ಪಡೆದಿವೆ.
ಈ ಸಾಧನೆಗಾಗಿ ಭಾರತದ ಮಹಿಳಾ ತಂಡಕ್ಕೆ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ 21.89 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದೆ.