ಬೆಂಗಳೂರು: ನಟ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಸ್ಮಾರಕ ತೆರವುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ವಿಷ್ಣುವರ್ಧನ್ ಅವರ ಸ್ಮಾರಕವನ್ನು ರಾತ್ರೋರಾತ್ರಿ ಧ್ವಂಸ ಮಾಡಿರುವುದು ನಮೆಗೆಲ್ಲ ನೋವು ತಂದಿದೆ. ಡಾ ವಿಷ್ಣುವರ್ಧನ್ ಸ್ಮಾರಕವನ್ನು ಶಾಶ್ವತವಾಗಿ ಕಾಪಾಡಿ, ಅದನ್ನು ರಾಷ್ಟ್ರೀಯ ಮಟ್ಟದ ಪ್ರವಾಸಿಗರ ಕೇಂದ್ರವಾಗಿ ಮಾಡಬೇಕು ಎಂದು ಪತ್ರದ ಮೂಲಕ ಆಗ್ರಹಿಸಿದ್ದಾರೆ.
ಕನ್ನಡ ಚಲನಚಿತ್ರ ರಂಗಕ್ಕೆ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಕೊಡುಗೆಯ ಬಗ್ಗೆ ಇಡೀ ಕರುನಾಡು ಮಾತನಾಡುತ್ತದೆ. ಎಲ್ಲರ ಮನೆಮಾತಾದ ಅದ್ಭುತ ನಟಶ್ರೇಷ್ಠರಿಗೆ ಸೂಕ್ತ ಗೌರವ ನೀಡಲಾಗದ, ಅವರ ಸಮಾಧಿ ಸ್ಥಳವನ್ನು ಉಳಿಸಿಕೊಳ್ಳಲಾಗದ ಸ್ಥಿತಿಗೆ ನಾವು ತಲುಪಿದ್ದೇವೆ ಎನ್ನುವುದು ನಿಜಕ್ಕೂ ಬೇಸರದ ಸಂಗತಿ ಎಂದಿದ್ದಾರೆ.
ಡಾ. ವಿಷ್ಣುವರ್ಧನ್ ಅವರ ಸಮಾಧಿ ಸ್ಥಳದ ಅಭಿಮಾನ್ ಸ್ಟುಡಿಯೋ ಭಾಗವನ್ನು ರಾತ್ರೋರಾತ್ರಿ ಕೆಡವಿ, ಅಸಂಖ್ಯಾತ ಅಭಿಮಾನಿಗಳಿಗೂ ಹಾಗೂ ಅವರ ಅಪೂರ್ವ ಸಾಧನೆಗಳಿಗೂ ಅನ್ಯಾಯ ಮಾಡಿರುವುದು ಅತ್ಯಂತ ನೋವುಂಟುಮಾಡಿದೆ. ಆ ನಿಟ್ಟಿನಲ್ಲಿ, ಡಾ. ವಿಷ್ಣುವರ್ಧನ್ ಅವರ ಸಮಾಧಿ ಸ್ಥಳದ ಭೂಮಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೂಡಲೇ ಜಾಗದ ಮಾಲೀಕರಿಂದ ಸ್ವಾಧೀನಪಡಿಸಿಕೊಂಡು, ಅವರಿಗೂ ಸರ್ಕಾರಿ ನಿಯಮಾನುಸಾರ ಪರಿಹಾರ ನ್ಯಾಯಸಮ್ಮತ ನೀಡುವುದಲ್ಲದೇ, ಸ್ಮಾರಕವನ್ನು ಕಾಪಾಡುವುದಲ್ಲದೇ, ಅದನ್ನು ರಾಷ್ಟ್ರಮಟ್ಟದ ಪ್ರವಾಸಿ ಕೇಂದ್ರವಾಗಿ, ಕಲೆ-ಸಂಸ್ಕೃತಿಯ ಪ್ರತೀಕವಾಗಿ ಕಲಾಗ್ರಾಮವಾಗಿ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಕನ್ನಡ ನಾಡಿನ ಕಲೆ, ಸಂಸ್ಕ್ರತಿಗಳ ಉಳಿವಿಗೆ ಕೊಡುಗೆ ನೀಡಿದ ಪ್ರತಿಯೊಬ್ಬ ಕಲಾವಿದನ ಘನತೆ-ಗೌರವ ಕಾಪಾಡುವುದು ಕನ್ನಡಿಗರ ಕರ್ತವ್ಯ. ಜನಪ್ರತಿನಿಧಿಯಾಗಿ ಸದಾ ಈ ನಿಲುವಿಗೆ ನಾವು ಬದ್ಧರಾಗಿದ್ದೇವೆಂದು ತಿಳಿಸಿದ್ದಾರೆ.