ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಕ್ರಮಣಕಾರಿ ಸುಂಕ ನೀತಿಗಳು ಮತ್ತು ಬ್ರಿಕ್ಸ್ ಒಕ್ಕೂಟದ ಮೇಲಿನ ನಿರಂತರ ಟೀಕೆಗಳ ಬೆನ್ನಲ್ಲೇ, ಜಾಗತಿಕ ದಕ್ಷಿಣ ರಾಷ್ಟ್ರಗಳಲ್ಲಿ ರಾಜತಾಂತ್ರಿಕ ಚಟುವಟಿಕೆಗಳು ಗರಿಗೆದರಿವೆ. ಭಾರತ, ಚೀನಾ, ಬ್ರೆಜಿಲ್ ಮತ್ತು ರಷ್ಯಾ ಸೇರಿದಂತೆ ಪ್ರಮುಖ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಅಮೆರಿಕದ ಡಾಲರ್ ಪ್ರಾಬಲ್ಯಕ್ಕೆ ಸವಾಲೆಸೆಯಲು ಮತ್ತು ಟ್ರಂಪ್ ಅವರ ವ್ಯಾಪಾರ ನೀತಿಗಳನ್ನು ಹಿಮ್ಮೆಟ್ಟಿಸಲು ಬಲವಾದ ಮೈತ್ರಿಕೂಟವನ್ನು ರೂಪಿಸಲು ಸಜ್ಜಾಗುತ್ತಿವೆ.
ಇತ್ತೀಚಿನ ದಿನಗಳಲ್ಲಿ, ಬ್ರಿಕ್ಸ್ ಸದಸ್ಯ ರಾಷ್ಟ್ರಗಳಾದ ಭಾರತ, ರಷ್ಯಾ, ಮತ್ತು ಬ್ರೆಜಿಲ್ ನಡುವೆ ಮಹತ್ವದ ರಾಜತಾಂತ್ರಿಕ ಮಾತುಕತೆಗಳು ನಡೆದಿದ್ದು, ಇದು ಕೂಡ ಟ್ರಂಪ್ ಕೆಂಗಣ್ಣಿಗೆ ಕಾರಣವಾಗಿತ್ತು. ಈಗ ಟ್ರಂಪ್ ವಿರುದ್ಧ ಶಕ್ತಿಪ್ರದರ್ಶನಕ್ಕೆ ಬ್ರಿಕ್ಸ್ ರಾಷ್ಟ್ರಗಳು ಸಜ್ಜಾಗುವ ಮೂಲಕ, ದೊಡ್ಡಣ್ಣನಿಗೆ ದೊಡ್ಡ ಪೆಟ್ಟು ನೀಡಲು ರಣತಂತ್ರ ರೂಪಿಸಿವೆ.
ಭಾರತ-ರಷ್ಯಾ ಸಂಬಂಧ ಬಲವರ್ಧನೆ:
ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಶನಿವಾರ ರಾತ್ರಿ ದೂರವಾಣಿ ಮೂಲಕ “ಉತ್ತಮ ಮತ್ತು ಸುದೀರ್ಘ ಸಂಭಾಷಣೆ” ನಡೆಸಿದ್ದಾರೆ. ಈ ಮಾತುಕತೆ ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಸಹಭಾಗಿತ್ವವನ್ನು ಇನ್ನಷ್ಟು ಆಳಗೊಳಿಸುವ ಬದ್ಧತೆಯನ್ನು ಪುನರುಚ್ಚರಿಸಿವೆ. ಇದರ ಜೊತೆಗೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಮಾಸ್ಕೋದಲ್ಲಿ ಪುಟಿನ್ ಅವರನ್ನು ಭೇಟಿ ಮಾಡಿದ್ದು, ಶೀಘ್ರದಲ್ಲೇ ಪುಟಿನ್ ಅವರು ಭಾರತಕ್ಕೆ ಭೇಟಿ ನೀಡಲಿರುವ ಬಗ್ಗೆಯೂ ಘೋಷಿಸಿದ್ದಾರೆ.

ಭಾರತ-ಬ್ರೆಜಿಲ್ ಸಂಬಂಧ ವೃದ್ಧಿ:
ಬ್ರೆಜಿಲ್ ಅಧ್ಯಕ್ಷ ಲೂಲಾ ಡಾ ಸಿಲ್ವಾ ಅವರು ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸಿ, ವ್ಯಾಪಾರ, ರಕ್ಷಣೆ, ಇಂಧನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ-ಬ್ರೆಜಿಲ್ ಸಂಬಂಧಗಳನ್ನು ಬಲಪಡಿಸುವ ಬಗ್ಗೆ ಚರ್ಚಿಸಿದ್ದಾರೆ. 2024 ರಲ್ಲಿ 12 ಶತಕೋಟಿ ಡಾಲರ್ ನಷ್ಟಿದ್ದ ಉಭಯ ದೇಶಗಳ ವ್ಯಾಪಾರವನ್ನು 2030ರ ವೇಳೆಗೆ 20 ಶತಕೋಟಿ ಡಾಲರ್‌ಗೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ. ಲೂಲಾ ಅವರು 2026 ರ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡಲು ಉದ್ದೇಶಿಸಿದ್ದಾರೆ.
ಭಾರತ-ಚೀನಾ ಸಂಬಂಧವೂ ಹಳಿಗೆ:
ಪ್ರಧಾನಿ ಮೋದಿ ಅವರು ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾಕ್ಕೆ ಭೇಟಿ ನೀಡಲು ಸಿದ್ಧರಾಗಿದ್ದಾರೆ. ಏಳು ವರ್ಷಗಳ ನಂತರ ಚೀನಾಗೆ ಮೋದಿ ಅವರ ಮೊದಲ ಭೇಟಿ ಇದಾಗಲಿದೆ. ಚೀನಾದ ಸರ್ಕಾರಿ ಪತ್ರಿಕೆ ‘ದಿ ಗ್ಲೋಬಲ್ ಟೈಮ್ಸ್’ ಕೂಡ ಭಾರತದ ಕುರಿತು ತನ್ನ ಧ್ವನಿಯನ್ನು ಮೃದುಗೊಳಿಸಿದೆ. ಮತ್ತೊಂದೆಡೆ ಚೀನಾಗೆ ಮೋದಿ ಭೇಟಿಯನ್ನೂ ಸ್ವಾಗತಿಸಿದೆ.
ಟ್ರಂಪ್‌ರ ಸುಂಕ ಮತ್ತು ಕ್ರಿಪ್ಟೋ ನೀತಿಗಳ ಬಗ್ಗೆ ಟೀಕೆ:
ರಷ್ಯಾ ತೈಲ ಖರೀದಿ ಮುಂದುವರಿಸಿದ್ದಕ್ಕೆ ಪ್ರತಿಯಾಗಿ ಭಾರತದ ಮೇಲೆ ಟ್ರಂಪ್ ಆಡಳಿತವು ಶೇ.50ರಷ್ಟು ಸುಂಕ ಹೇರಿದೆ. ಬ್ರೆಜಿಲ್ ಕೂಡ ಇದೇ ಮಾದರಿಯಲ್ಲಿ ಶೇ.50ರಷ್ಟು ಸುಂಕ ಹೆಚ್ಚಳವನ್ನು ಎದುರಿಸುತ್ತಿದೆ. ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಬೋಲ್ಸೊನಾರೊ ಅವರ ರಾಜಕೀಯ ದಮನದ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಟ್ರಂಪ್ ಅವರು ಬ್ರಿಕ್ಸ್ ರಾಷ್ಟ್ರಗಳನ್ನು “ಅಮೆರಿಕ-ವಿರೋಧಿ” ಎಂದು ಟೀಕಿಸಿದ್ದು, ಹೆಚ್ಚುವರಿ ಶೇ.10 ಸುಂಕದ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಭಾರತವು ಸುಂಕಗಳನ್ನು “ಅನುಚಿತ” ಎಂದು ಕರೆದರೆ, ಬ್ರೆಜಿಲ್ ಅಧ್ಯಕ್ಷ ಲೂಲಾ ಅವರು ಟ್ರಂಪ್ ಜೊತೆ ನೇರವಾಗಿ ಮಾತುಕತೆ ನಡೆಸಲು ನಿರಾಕರಿಸಿದ್ದಾರೆ.
ಕ್ರಿಪ್ಟೋಕರೆನ್ಸಿಯ ಬಗ್ಗೆ ಟ್ರಂಪ್ ಅವರ ನಿಲುವಿನಲ್ಲಿ ಬದಲಾವಣೆ ಕಂಡುಬಂದಿದೆ. ಹಿಂದೆ ಬಿಟ್‌ಕಾಯಿನ್ ಅನ್ನು “ವಂಚನೆ” ಎಂದು ಕರೆದಿದ್ದ ಟ್ರಂಪ್ ಈಗ ಅಮೆರಿಕವನ್ನು ಕ್ರಿಪ್ಟೋ ರಾಜಧಾನಿಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಬ್ರಿಕ್ಸ್ ದೇಶಗಳು ಡಾಲರ್‌ಗೆ ಪರ್ಯಾಯವಾಗಿ ತಮ್ಮದೇ ಆದ ಕರೆನ್ಸಿಯನ್ನು ತರುವ ಪ್ರಯತ್ನಕ್ಕೆ ಇದು ಪ್ರತ್ಯುತ್ತರ ಎಂದು ಪರಿಗಣಿಸಲಾಗಿದೆ.
ಬ್ರಿಕ್ಸ್ ಒಕ್ಕೂಟದ ಸಾಮರ್ಥ್ಯ:
ಬ್ರಿಕ್ಸ್ ಒಕ್ಕೂಟವು ಪ್ರಸ್ತುತ ವಿಶ್ವದ ಜನಸಂಖ್ಯೆಯ ಸುಮಾರು ಶೇ.46ರಷ್ಟನ್ನು ಪ್ರತಿನಿಧಿಸುತ್ತದೆ ಮತ್ತು ಜಾಗತಿಕ ಜಿಡಿಪಿಗೆ ಸುಮಾರು ಶೇ.35.6 ರಷ್ಟು ಕೊಡುಗೆ ನೀಡುತ್ತಿದೆ. ಟ್ರಂಪ್ ಅವರ ಸುಂಕ ನೀತಿಗಳ ವಿರುದ್ಧ ಈ ರಾಷ್ಟ್ರಗಳು ಒಗ್ಗೂಡುತ್ತಿರುವುದು, ಜಾಗತಿಕ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ತರಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.



















