ಬೆಂಗಳೂರು: ಅಗಸ್ಟ್ 27ರಂದು ಗಣೇಶ್ ಹಬ್ಬ ಇರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಕಮಿಷನರ್ ಮೊದಲೇ ಎಚ್ಚರಿಕೆ ವಹಿಸಿ ವಲಯದ ಅಧಿಕಾರಿಗಳ ಜೊತೆ ಸಭೆ ನಡೆಸಿ, ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಿಸಲು ಕರೆ ನೀಡಿದ್ದಾರೆ.
ಪಿಓಪಿ ವಸ್ತುಗಳನ್ನು ಬಳಸಿ ಗಣೇಶ ಮೂರ್ತಿಗಳನ್ನು ತಯಾರಿಸುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದ್ದು, ಪಿಓಪಿ ಗಣೇಶ ಮೂರ್ತಿಗಳನ್ನು ತಯಾರಿಸುವವರ ಮೇಲೆ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಸಿದ್ದಾರೆ.
ನಗರದಲ್ಲಿ 40ಕ್ಕೂ ಹೆಚ್ಚು ಕೆರೆಗಳ ಬಳಿಯ ಕಲ್ಯಾಣಿಗಳು ಹಾಗೂ ಪ್ರತ್ಯೇಕ ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆಗೆ ಅವಕಾಶ ಮಾಡಲಾಗಿದ್ದು,ಆ ಎಲ್ಲ ಕಲ್ಯಾಣಿಗಳ ಬಳಿ ವ್ಯವಸ್ಥಿತವಾಗಿ ಬ್ಯಾರಿಕೇಡ್ ಗಿಂತ ನುರಿತ ಈಜುಗಾರರು, ವಿದ್ಯುತ್ ದೀಪಗಳ ಸೌಲಭ್ಯ, ಅಗತ್ಯವಿರುವ ಕಡೆ ಕ್ರೇನ್ ಗಳ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡುವಂತೆ ಸೂಚನೆ ನೀಡಿದ್ದಾರೆ.
ಭದ್ರತಾ ದೃಷ್ಟಿಯಿಂದ ಸಿಸಿಟಿವಿ ಅಳವಡಿಕೆ, ಪೊಲೀಸ್ ಸಿಬ್ಬಂದಿ ನಿಯೋಜನೆಗೆ ಸಿದ್ದತೆಗೆ ಹಾಗೂ ನಗರದ ಮನೆಗಳಲ್ಲಿ ಪ್ರತಿಷ್ಠಾಪಿಸುವ ಸಣ್ಣ-ಸಣ್ಣ ಗಣೇಶ ಮೂರ್ತಿಗಳನ್ನು ವಿಸರ್ಜನೆಯ ಹಿನ್ನೆಲೆಯಲ್ಲಿ ಆಯಾ ವಾರ್ಡ್ ಗಳ ಪ್ರಮುಖ ಸ್ಥಳ ಹಾಗೂ ಜಂಕ್ಷನ್‌ಗಳಲ್ಲಿ ಸಂಚಾರಿ ವಿಸರ್ಜನಾ ಘಟಕ (ಮೊಬೈಲ್ ಟ್ಯಾಂಕ್) ಗಳನ್ನು ತಾತ್ಕಾಲಿವಾಗಿ ವ್ಯವಸ್ಥೆ ಮಾಡುವಂತೆ ತಿಳಿಸಿದ್ದಾರೆ.


















