ಬೆಂಗಳೂರು: ಅನಿರ್ದಿಷ್ಟಾವಧಿಯವರೆಗೆ ಮುಷ್ಕರಕ್ಕೆ ಸಾರಿಗೆ ಸಿಬ್ಬಂದಿ ಕರೆ ನೀಡಿದ್ದಕ್ಕೆ ಕರ್ನಾಟಕ ಹೈಕೋರ್ಟ್ (High Court) ಛೀಮಾರಿ ಹಾಕಿತ್ತು. ಈ ಹಿನ್ನೆಲೆಯಲ್ಲಿ ಬಸ್ ಗಳು ರಸ್ತೆಗೆ ಇಳಿದಿವೆ.
ಇಂದು ಸಂಜೆಯಿಂದಲೇ ನಾಲ್ಕೂ ನಿಗಮಗಳ (KSRTC, NWKRTC, KKRTC, BMTC) ಬಸ್ ಸಂಚಾರ ಆರಂಭವಾಗಿವೆ. ಎಂದಿನಂತೆ ತಮ್ಮ ತಮ್ಮ ರೂಟ್ ಗಳತ್ತ ಬಸ್ ಗಳು ಮುಖ ಮಾಡಿವೆ. ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಎಂದಿನಂತೆ ಓಡಾಟ ನಡೆಸಿವೆ. ಹೀಗಾಗಿ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಾರಿಗೆ ಇಲಾಖೆ ನೌಕರರು ಮಂಗಳವಾರ ಮುಷ್ಕರ ನಡೆಸಿದರು. ಮುಷ್ಕರ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗಿಲ್ಲ. ಇದರಿಂದ ನಾಲ್ಕೂ ನಿಗಮಗಳ ಬಸ್ ಸಂಚಾರ ಸ್ಥಗಿತಗೊಂಡಿದ್ದವು. ನಿಮ್ಮ ಸಮಸ್ಯೆ ಇದ್ದರೆ ಸರ್ಕಾರದೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿ. ಜನಸಾಮಾನ್ಯರನ್ನು ಒತ್ತೆಯಾಗಿರಿಸುವುದನ್ನು ಸಹಿಸುವುದಿಲ್ಲ. ಹೈಕೋರ್ಟ್ ಆದೇಶವಿದ್ದರೂ ನೀವು ಅದನ್ನು ಪಾಲಿಸಿಲ್ಲ. ಎಸ್ಮಾ ಕಾಯ್ದೆಯಡಿ ಸಂಘಟನೆಯ ಪದಾಧಿಕಾರಿಗಳನ್ನು ಬಂಧಿಸಬಹುದು ಎಂದು ಸಾರಿಗೆ ಸಂಘಟನೆಗೆ ತರಾಟೆಗೆ ತೆಗೆದುಕೊಂಡಿತು. ಇದರ ಬೆನ್ನಲ್ಲೇ ಮುಷ್ಕರ ಕೈ ಬಿಡಲಾಗಿದೆ.