ಬೆಂಗಳೂರು: ಸರ್ಕಾರದ ಖಜಾನೆ ತುಂಬಿ ತುಳುಕುತ್ತಿದೆ ಎಂದು ಹೇಳಿದವರಿಗೆ ನೌಕರರ ಸಮಸ್ಯೆ ಪರಿಹಾರ ಮಾಡುವುದಕ್ಕೆ ಯಾಕಾಗುತ್ತಿಲ್ಲ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಆಕ್ರೋಶ ಹೊರಹಾಕಿದ್ದಾರೆ.
ಸಾರಿಗೆ ನೌಕರರ ಮುಷ್ಕರದ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಜ್ಞಾನೇಂದ್ರ, ಸಾರಿಗೆ ನೌಕರರ ಜೊತೆ ಸರ್ಕಾರ ಮಾತುಕತೆ ನಡೆಸುವಲ್ಲಿ ವಿಫಲವಾಗಿದೆ. ಹಿಂದೆ ಯಡಿಯೂರಪ್ಪ ಇದ್ದಾಗ ಇದೇ ಸಿದ್ದರಾಮಯ್ಯ ನಮಗೆ ಪ್ರಶ್ನೆ ಮಾಡಿದ್ದರು. ಸಾರಿಗೆ ನೌಕರರ ಮೇಲೆ ಎಸ್ಮಾ ಹಾಕಿ ಬೆದರಿಸಿದ್ದರು. “ನಿನ್ನ ಕುರ್ಚಿ ಎಷ್ಟು ಶಾಶ್ವತ ಎಂದು ತಿಳಿದುಕೊಂಡಿದ್ದೀಯಾ?” ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದರು. ಈಗ ನಾನು ಸಿದ್ದರಾಮಯ್ಯಗೆ ಪ್ರಶ್ನೆ ಮಾಡುತ್ತೇನೆ, “ನೀವು ಎಷ್ಟು ದಿನ ಅಧಿಕಾರದಲ್ಲಿ ಇರುತ್ತೀರಿ ಎಂದುಕೊಂಡಿದ್ದೀರಿ?” ಎಂದು ಕೇಳಿದ್ದಾರೆ.
ನೀವು ಮಹಿಳೆಯರಿಗೆ ಟಿಕೇಟ್ ಫ್ರೀ ಎಂದು ನೌಕರರಿಗೆ ಸಂಬಳವನ್ನೇ ನೀಡುತ್ತಿಲ್ಲ. ನೌಕರರನ್ನು ಕರೆದು ಮಾತಾಡಿ ಸಮಸ್ಯೆ ಬಗೆಹರಿಸಬೇಕಿತ್ತು. ಇದರಿಂದ ಜನರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದವರು ವಾಗ್ದಾಳಿ ನಡೆಸಿದ್ದಾರೆ.
ಖಾಸಗಿ ಬಸ್‌ನವರು ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಜನಸಾಮಾನ್ಯರ ಹಣ ವ್ಯರ್ಥವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ತಕ್ಷಣವೇ ಸರ್ಕಾರ ಒಂದು ನಿರ್ಧಾರ ತೆಗೆದುಕೊಳ್ಳಬೇಕು. ಎಲ್ಲದಕ್ಕೂ ನಮ್ಮ ಮೇಲೆ ಬೆರಳು ತೋರಿಸುತ್ತಾರೆ. ಅವರು ಮಾಡಿದನ್ನು ನಾವು ತೀರಿಸಿದ್ದೇವೆ ಎನ್ನುತ್ತಾರೆ. ಜನ ನಮ್ಮನ್ನು ಸೋಲಿಸಿದ್ದಾರೆ. ನಿಮ್ಮನ್ನು ಗೆಲ್ಲಿಸಿದ್ದಾರಲ್ಲ ನೀವು ಅವರಿಗೆ ಒಳ್ಳೆಯದು ಮಾಡಬೇಕಿತ್ತಲ್ಲ. ಖಜಾನೆ ತುಂಬಿ ತುಳುಕುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಿರಿ. ಈಗ ಹಣ ಇಲ್ಲವೆಂದು ಹೇಳುತ್ತಿದ್ದೀರಿ. ನುಡಿದಂತೆ ನಡೆದಿದ್ದೇವೆ ಎನ್ನುವುದು ಇದೆಯೇ ? ಎಂದು ಪ್ರಶ್ನಿಸಿದ್ದಲ್ಲದೇ, ಗ್ರಾಮೀಣ ಭಾಗದಲ್ಲಿ ತುಂಬಾ ಸಮಸ್ಯೆಯಾಗಿದೆ. ಕೂಡಲೇ ಸಮಸ್ಯೆ ಪರಿಹಾರ ಮಾಡಿ ಎಂದು ಆಗ್ರಹಿಸಿದ್ದಾರೆ.


















