ನವದೆಹಲಿ: 17000 ಕೋಟಿ ರೂ. ಮೌಲ್ಯದ ಬ್ಯಾಂಕ್ ಸಾಲ ವಂಚನೆ ಪ್ರಕರಣದ ಸುಳಿಗೆ ಸಿಲುಕಿರುವ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರು ಇಂದು ದೆಹಲಿಯ ಜಾರಿ ನಿರ್ದೇಶನಾಲಯದ (ಇಡಿ) ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆಯ ಸಮಯದಲ್ಲಿ ಅಂಬಾನಿ ಅವರೊಂದಿಗೆ ಅವರ ವಕೀಲರಿಗೆ ಇರಲು ಅನುಮತಿ ನಿರಾಕರಿಸಲಾಗಿದ್ದು, ಸಂಪೂರ್ಣ ವಿಚಾರಣಾ ಪ್ರಕ್ರಿಯೆಯನ್ನು ಕ್ಯಾಮೆರಾದಲ್ಲಿ ದಾಖಲಿಸಲಾಗುವುದು ಎಂದು ಇ.ಡಿ. ಮೂಲಗಳು ತಿಳಿಸಿವೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ದಾಖಲಾದ ಹೇಳಿಕೆಗಳು ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಸ್ವೀಕಾರಾರ್ಹವಾಗಿರುತ್ತವೆ.
ಅನಿಲ್ ಅಂಬಾನಿ ಅವರಿಗೆ ಸಂಬಂಧಿಸಿದ ಕಂಪನಿಗಳ ಮೇಲೆ ಇ.ಡಿ. ಇತ್ತೀಚೆಗೆ ದಾಳಿ ನಡೆಸಿ, ಹಲವು ದಾಖಲೆಗಳು ಮತ್ತು ಕಂಪ್ಯೂಟರ್ ಉಪಕರಣಗಳನ್ನು ವಶಪಡಿಸಿಕೊಂಡಿತ್ತು. ಇದರ ಬೆನ್ನಲ್ಲೇ, ಆಗಸ್ಟ್ 1 ರಂದು ತನಿಖಾ ಸಂಸ್ಥೆಯು ಅವರಿಗೆ ಸಮನ್ಸ್ ಜಾರಿ ಮಾಡಿತ್ತು.
ಬ್ಯಾಂಕುಗಳಿಂದ ಮಾಹಿತಿ ಸಂಗ್ರಹ
ಹಣಕಾಸು ಅಪರಾಧ ತಡೆ ಸಂಸ್ಥೆಯು ಅಂಬಾನಿ ಕಂಪನಿಗಳಿಗೆ ಮಂಜೂರು ಮಾಡಲಾದ ಸಾಲಗಳ ಕುರಿತು ವಿವರಗಳನ್ನು ಕೋರಿ 12-13 ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳಿಗೆ ಪತ್ರ ಬರೆದಿದೆ ಎಂದು ಮೂಲಗಳು ತಿಳಿಸಿವೆ. ರಿಲಯನ್ಸ್ ಹೌಸಿಂಗ್ ಫೈನಾನ್ಸ್, ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್‌ಗೆ ಸಾಲ ಮಂಜೂರು ಮಾಡುವಾಗ ಅನುಸರಿಸಿದ ಕಾರ್ಯವಿಧಾನಗಳ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಯುಕೋ ಮತ್ತು ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ನಿಂದ ವಿವರಗಳನ್ನು ಕೇಳಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಯೆಸ್ ಬ್ಯಾಂಕ್‌ನಿಂದ (2017-2019ರ ಅವಧಿಯಲ್ಲಿ) ಸುಮಾರು 3,000 ಕೋಟಿ ರೂ. ಮೊತ್ತದ ಸಾಲವನ್ನು ಅಕ್ರಮವಾಗಿ ಬೇರೆಡೆಗೆ ವರ್ಗಾಯಿಸಲಾಗಿದೆ. ನಂತರ, ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ (RCom) 14,000 ಕೋಟಿಗೂ ಅಧಿಕ ಸಾಲ ವಂಚನೆ ಎಸಗಿದೆ ಎಂದು ಅಧಿಕಾರಿಗಳು ಕಂಡುಕೊಂಡಿದ್ದಾರೆ.
ಈ ಆರೋಪಗಳ ಹಿನ್ನೆಲೆಯಲ್ಲಿ ಜುಲೈ 24 ರಂದು ದೆಹಲಿ ಮತ್ತು ಮುಂಬೈನಲ್ಲಿ ಹಲವು ಸ್ಥಳಗಳಲ್ಲಿ ದಾಳಿಗಳನ್ನು ನಡೆಸಲಾಗಿತ್ತು. ಈ ದಾಳಿಗಳು ಅನಿಲ್ ಅಂಬಾನಿ ಗ್ರೂಪ್ ಕಂಪನಿಗಳ ಅಧಿಕಾರಿಗಳು ಸೇರಿದಂತೆ 50 ಕಂಪನಿಗಳು ಮತ್ತು 25 ವ್ಯಕ್ತಿಗಳಿಗೆ ಸೇರಿದ ಸ್ಥಳಗಳಲ್ಲಿ ಮೂರು ದಿನಗಳ ಕಾಲ ನಡೆದಿದ್ದವು. 25ಕ್ಕೂ ಹೆಚ್ಚು ಜನರನ್ನು ವಿಚಾರಣೆಗೂ ಒಳಪಡಿಸಲಾಗಿತ್ತು.
ಲುಕ್ಔಟ್ ನೋಟಿಸ್ ಕೂಡ ಜಾರಿ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ತನಿಖಾ ಸಂಸ್ಥೆಯು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದು, ಇದು ಈ ಪ್ರಕರಣದ ಮೊದಲ ಬಂಧನವಾಗಿತ್ತು. ಬಿಸ್ವಾಲ್ ಟ್ರೇಡ್ಲಿಂಕ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಪಾರ್ಥ ಸಾರಥಿ ಬಿಸ್ವಾಲ್ ಅವರನ್ನು ಆಗಸ್ಟ್ 1 ರಂದು ಪಿಎಂಎಲ್ಎ ಅಡಿಯಲ್ಲಿ ಬಂಧಿಸಲಾಗಿದೆ. ರಿಲಯನ್ಸ್ ಪವರ್ ಪರವಾಗಿ 68.2 ಕೋಟಿ ರೂ. ಮೌಲ್ಯದ ನಕಲಿ ಗ್ಯಾರಂಟಿಗಳನ್ನು ಸಲ್ಲಿಸಿದ ಆರೋಪ ಅವರ ಮೇಲಿದೆ. ಅಲ್ಲದೆ, ಅನಿಲ್ ಅಂಬಾನಿ ವಿರುದ್ಧ ಲುಕ್ಔಟ್ ನೋಟಿಸ್ ಅನ್ನೂ ಹೊರಡಿಸಲಾಗಿದೆ.
ಸಿಬಿಐ ದಾಖಲಿಸಿದ ಎರಡು ಎಫ್ಐಆರ್ ಆಧರಿಸಿ ಈ ದಾಳಿಗಳನ್ನು ನಡೆಸಲಾಗಿದೆ. ಸಾಲ ನೀಡುವ ಸ್ವಲ್ಪ ಮೊದಲು ಯೆಸ್ ಬ್ಯಾಂಕ್ ಪ್ರವರ್ತಕರು ತಮ್ಮ ಸಂಸ್ಥೆಗಳಲ್ಲಿ “ಹಣವನ್ನು ಪಡೆದಿದ್ದಾರೆ” ಎಂದು ಜಾರಿ ನಿರ್ದೇಶನಾಲಯವು ಪತ್ತೆಹಚ್ಚಿದೆ. ಈ “ಲಂಚ” ಮತ್ತು ಸಾಲದ ನಡುವಿನ ಸಂಬಂಧದ ಬಗ್ಗೆ ಸಂಸ್ಥೆ ತನಿಖೆ ನಡೆಸುತ್ತಿದೆ.



















