ಬೆಳಗಾವಿ: ಶಾಲೆಯ ಮುಖ್ಯ ಶಿಕ್ಷಕ (School Head Master) ಮುಸ್ಲಿಂ ಸಮುದಾಯದವರು ಎನ್ನುವ ಕಾರಣಕ್ಕೆ ದುಷ್ಕರ್ಮಿಗಳು ಮಕ್ಕಳು ಕುಡಿಯುವ ನೀರಿನಲ್ಲಿ ವಿಷ ಪ್ರಾಷಣ ಬೆರೆಸಿರುವ ಘಟನೆ ನಡೆದಿದೆ.
ಜಿಲ್ಲೆಯ (Belagavi) ಸವದತ್ತಿ (Savadatti) ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೂಲಿಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 41 ಮಕ್ಕಳು ಓದುತ್ತಿದ್ದಾರೆ. ಈ ಶಾಲೆಯ ಮುಖ್ಯ ಶಿಕ್ಷಕರಾಗಿ ಸುಲೇಮಾನ್ ಗೋರಿನಾಯಕ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಆತನನ್ನು ಶಾಲೆಯಿಂದ ಎತ್ತಂಗಡಿ ಮಾಡಿಸಬೇಕು ಎಂದು ಪ್ಲಾನ್ ಮಾಡಿದ್ದ ಸಾಗರ್ ಪಾಟೀಲ್, ಕೃಷ್ಣಾ ಪಾಟೀಲ್ ಎಂಬಾತನನ್ನು ಬ್ಲಾಕ್ ಮೇಲ್ ಮಾಡಿ ಮನವಳ್ಳಿಯಿಂದ ಕೀಟನಾಶಕ ತರಿಸಿ ಮಾಜಾ ಬಾಟಲ್‌ನಲ್ಲಿ ಬೆರೆಸಿ ನೀರಿಗೆ ಬೆರೆಸುವಂತೆ ಮಾಡಿದ್ದಾನೆ ಎನ್ನಲಾಗಿದೆ.
ವಿಷ ಬೆರೆಸಿದ ನಂತರ ಮಕ್ಕಳು ಅದೇ ನೀರು ಕುಡಿದು ಜುಲೈ 14 ರಂದು ಅಸ್ವಸ್ಥರಾಗಿದ್ದರು. ಅಸ್ವಸ್ಥರಾದ 11 ಮಕ್ಕಳನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಸದ್ಯ ಮಕ್ಕಳು ಚೇತರಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.