ಲಕ್ನೋ : ಸ್ವ-ಕ್ಷೇತ್ರ ವಾರಣಾಸಿಗೆ ಇಂದು ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ರಕ್ಷಣೆ, ಪ್ರವಾಸೋದ್ಯಮ, ನಗರಾಭಿವೃದ್ಧಿ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಉದ್ಘಾಟನೆಗೊಳಿಸಿದ್ದಾರೆ.
ಸುಮಾರು 2,200 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ನೆರವೇರಿಸಿದರು. ಇದೇ ವೇಳೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 20ನೇ ಕಂತಿನ ಹಣವನ್ನು ಜಮೆ ಮಾಡಿದ್ದಾರೆ.
9.7 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ 20,000 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 20ನೇ ಕಂತಿನ ಹಣವನ್ನು ಜಮೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಆಪರೇಷನ್ ಸಿಂಧೂರ ಯಶಸ್ಸಿನ ಬಗ್ಗೆ ವಿವರಣೆ ನೀಡಿದ್ದಾರೆ. ಆಪರೇಷನ್ ಸಿಂಧೂರ ಯಶಸ್ಸನ್ನು ನಾನು ಮಹಾದೇವನಿಗೆ ಅರ್ಪಿಸುತ್ತೇನೆ ಎಂದಿದ್ದಾರೆ.
ನಮ್ಮ ಹೆಣ್ಣುಮಕ್ಕಳ ಸಿಂಧೂರಕ್ಕೆ ಸೇಡು ತೀರಿಸಿಕೊಳ್ಳಲು ನಾವು ತೆಗೆದುಕೊಂಡ ಪ್ರತಿಜ್ಞೆ ಫಲಿಸಿದೆ. ಮಹಾದೇವನ ಆಶೀರ್ವಾದದಿಂದ ಸಾಧ್ಯವಾಗಿದೆ. ಹಾಗಾಗಿ ʻಆಪರೇಷನ್ ಸಿಂಧೂರʼದ ಯಶಸ್ಸನ್ನು ಮಹಾದೇವನ ಪಾದಗಳಿಗೆ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.



















