ಮಂಗಳೂರು : ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಕನಿಷ್ಟ ತಲಾ ಇಬ್ಬರಂತೆ ಸ್ತ್ರೀರೋಗ, ಅರಿವಳಿಕೆ ಮತ್ತು ಮಕ್ಕಳ ತಜ್ಞರು ಕಡ್ಡಾಯಗೊಳಿಸಲು ಕ್ರಮ ವಹಿಸಲಾಗುತ್ತದೆ. ಅದಕ್ಕಾಗಿ ಹೆಚ್ಚಿನ ಒತ್ತಡವಿಲ್ಲದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿನ ಈ ತಜ್ಞರನ್ನು ತಾಲೂಕು ಆಸ್ಪತ್ರೆಗಳಿಗೆ ವರ್ಗಾಯಿಸುವ ಮೂಲಕ ತಾಲೂಕು ಆಸ್ಪತ್ರೆಗಳನ್ನು ಬಲಪಡಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ವೆನ್ಲಾಕ್ ಆರ್‌ಎಪಿಸಿಸಿ ಸಭಾಂಗಣದಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿಯ ಮಹಾಸಭೆ ಅಧ್ಯಕ್ಷತೆ ವಹಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ದಿನೇಶ್, ಅರಿವಳಿಕೆ, ಸ್ತ್ರೀರೋಗ ತಜ್ಞರು ತಲಾ ಇಬ್ಬರು ಇದ್ದಲ್ಲಿ ದಿನದ 24 ಗಂಟೆಯೂ ಸೇವೆ ನೀಡಲು ಸಾಧ್ಯವಾಗಲಿದೆ. ಆ ಸಂದರ್ಭಹೆರಿಗೆ ಮತ್ತು ಇತರ ಶಸ್ತ್ರ ಚಿಕಿತ್ಸೆಗಳನ್ನೂ ತಾಲೂಕು ಮಟ್ಟದಲ್ಲಿ ನಡೆಸಲು ಸಾಧ್ಯವಾಗಲಿದೆ. ಸದ್ಯ ತಾಲೂಕು ಆಸ್ಪತ್ರೆ ಗಳಲ್ಲಿ ಈ ಎಲ್ಲಾ ಹುದ್ದೆಗಳ ಮಂಜೂರಾತಿ ಸಂಖ್ಯೆ ತಲಾ ಒಂದಿದೆ. ಹೆಚ್ಚು ಮಾಡುವುದಕ್ಕೆ ಇಲಾಖಾ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಒತ್ತಡ ಕಡಿಮೆಯಿದೆ. ಹಾಗಾಗಿ ಅಂತಹ ಕೇಂದ್ರಗಳಿಂದ ಈ ತಜ್ಞ ವೈದ್ಯರನ್ನು ತಾಲೂಕು ಆಸ್ಪತ್ರೆಗಳಿಗೆ ವರ್ಗಾಯಿಸುವ ಮೂಲಕ ಹೆಚ್ಚಿನ ಸೇವೆಯನ್ನು ಪಡೆಯಲು ಸಾಧ್ಯ ಎಂದವರು ಹೇಳಿದ್ದಾರೆ.
ವೆನ್ಲಾಕ್ ಆಸ್ಪತ್ರೆಯಲ್ಲಿ ನೂತನವಾಗಿ ಸಿದ್ಧಗೊಂಡಿರುವ ಕ್ಯಾಥ್‌ಲ್ಯಾಬ್ ಶೀಘ್ರವಾಗಿ ಕಾರ್ಯಾರಂಭಿಸಲಿರುವುದಾಗಿ ಸಭೆಯಲ್ಲಿ ಆಶ್ವಾಸನೆ ನೀಡಿದ ಸಚಿವ ದಿನೇಶ್, ಇಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಆಂಜಿಯೋಪ್ಲಾಸ್ಟಿಯ ಮೂಲಕ ಸ್ಟಂಟ್ ಅಳವಡಿಕೆ ಸೇರಿದಂತೆ ಹೃದ್ರೋಗ ಶಸ್ತ್ರ ಚಿಕಿತ್ಸೆಗಳು ಉಚಿತವಾಗಿರಲಿದೆ. ಆದರೆ ಆಂಜಿಯೋಗ್ರಾಮ್‌ಗೆ ನಿಯಮಗಳ ಪ್ರಕಾರ ಬಿಪಿಎಲ್‌ದಾರರಿಗೆ 5000 ರೂ. ಕನಿಷ್ಟ ದರ ನಿಗದಿಪಡಿಸಲಾಗಿದೆ. ಆದರೆ ಈ ದರವನ್ನು ಕೂಡಾ ಉಚಿತವಾಗಿ ಮಾಡುವ ನಿಟ್ಟಿನಲ್ಲಿ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನು, ಹೃದಯಾಘಾತದ ಸಂದರ್ಭ ರೋಗಿಗೆ ಅಳವಡಿಸ ಲಾಗುವ ಸಿಂಗಲ್ ಸ್ಟಂಟ್ ಬೆಲೆ 60,000 ರೂ.ಗಳಿದ್ದು, ಎಪಿಎಲ್ ಕಾರ್ಡ್‌ದಾರರಿಗೆ 42,000 ರೂ., ಡಬಲ್ ಸ್ಟಂಟ್‌ಗೆ ನಿಗದಿತ 85,000 ರೂ.ಗಳ ಬದಲಿಗೆ ಎಪಿಎಲ್‌ನವರಿಗೆ 59500 ರೂ. ಹೆಚ್ಚುವರಿ ಸ್ಟಂಟ್‌ಗೆ ನಿಗದಿತ 28,849 ರೂ.ಗಳಾಗಿದ್ದು, ಎಪಿಎಲ್‌ನವರಿಗೆ 20,194 ರೂ. ಸೇರಿದಂತೆ ಆಂಜಿಯೋಗ್ರಾಮ್ ಹೊರತುಪಡಿಸಿ ಉಳಿದ ಹೃದಯ ಸಂಬಂಧಿ ಚಿಕಿತ್ಸೆಗೆ ಎಪಿಎಲ್‌ನವರಿಗೆ ಶೇ. 70:30 (ಶೇ. 30ರಷ್ಟು ಸರಕಾರ ಭರಿಸುತ್ತದೆ) ದರದಲ್ಲಿ ವೆನ್‌ಲಾಕ್‌ನ ಕ್ಯಾಥ್‌ಲ್ಯಾಬ್‌ನಲ್ಲಿ ಚಿಕಿತ್ಸೆ ಲಭವಾಗಲಿದೆ. ಎಪಿಎಲ್‌ನವರಿಗೆ ಆ್ಯಂಜಿಯೋಗ್ರಾಮ್‌ಗೆ 7000 ದರ ನಿಗದಿಯಾಗಿದೆ ಎಂದು ಸಭೆಯಲ್ಲಿ ಲಾಕ್ ಆಧೀಕ್ಷಕ ಡಾ. ಶಿವಪ್ರಕಾಶ್‌ರವರು ವಿವರಿಸಿದರು.