ಬೆಂಗಳೂರು : ಕೆ.ಆರ್.ನಗರದಲ್ಲಿ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿನ್ನೆ(ಶುಕ್ರವಾರ) ತೀರ್ಪು ಪ್ರಕಟಗೊಳಿಸಿದೆ.
ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಬೆದರಿಕೆ, ವಿಡಿಯೋ ಸೆರೆ, ಐಟಿ ಆಕ್ಟ್ ಸಾಕ್ಷ್ಯ ನಾಶ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಶಿಕ್ಷೆ ಪ್ರಮಾಣವನ್ನು ಕೋರ್ಟ್ ನಿಗದಿಗೊಳಿಸುತ್ತದೆ. ಇಂದು ಅಪರಾಧಿ ಪ್ರಜ್ವಲ್ ರೇವಣ್ಣನನ್ನು ಕೋರ್ಟ್ ಗೆ ಪೊಲೀಸರು ಹಾಜರು ಪಡಿಸಲಿದ್ದಾರೆ. ಅಪರಾಧಿಯ ಸಮ್ಮುಖದಲ್ಲೇ ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಇಂದು ಪ್ರಕಟಗೊಳಿಸಲಿದೆ.
ಶಿಕ್ಷೆಯ ಪ್ರಮಾಣ ಹೇಗಿರಬಹುದು !? :
ಬಿಎನ್ಎಸ್ 376(2) (k), 376 (2) (n), 354 (a) (b) (c), 506 ಮತ್ತು 201, IT ACT 66(E) ಅಡಿಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ದೂರು ದಾಖಲಾಗಿದೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 376(2) (k) ಮತ್ತು 376 (2) (n) ಕನಿಷ್ಟ 10 ವರ್ಷ, ಗರಿಷ್ಠ ಜೀವಿತಾವಧಿವರೆಗೂ ಶಿಕ್ಷೆ ವಿಧಿಸುವ ವಿವೇಚನಾಧಿಕಾರವನ್ನು ಕೋರ್ಟ್ ಹೊಂದಿದೆ. ಅಷ್ಟಲ್ಲದೇ, 354 (a) (b) (c) ಅಡಿಯಲ್ಲಿ 3 ವರ್ಷ ಶಿಕ್ಷೆ ವಿಧಿಸಬಹುದಾಗಿದೆ.
ಸೆಕ್ಷನ್ 506 ಅಡಿಯಲ್ಲಿ 6 ತಿಂಗಳು, 201 ಬಿಎನ್ಎಸ್ ಅಡಿಯಲ್ಲಿ ಕನಿಷ್ಠ 1 ವರ್ಷದಿಂದ 7 ವರ್ಷ ಶಿಕ್ಷೆ ನೀಡಬಹುದು. ಸೆಕ್ಷನ್ 66(E) ಐಟಿ ಆ್ಯಕ್ಟ್ 2008 ಅಡಿಯಲ್ಲಿ 3 ವರ್ಷ ಶಿಕ್ಷೆ ವಿಧಿಸುವ ಅವಕಾಶಗಳಿವೆ. ನ್ಯಾಯಾಲಯ ಇಂದು ಎಷ್ಟು ವರ್ಷಗಳ ಕಾಲ ಶಿಕ್ಷೆ ಪ್ರಮಾಣ ಪ್ರಕಟ ಮಾಡುತ್ತದೋ ಎಂದು ಕಾದು ನೋಡಬೇಕಿದೆ.