ಲಂಡನ್: ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಅಂತಿಮ ಟೆಸ್ಟ್ ಪಂದ್ಯದ ಎರಡನೇ ದಿನದಂದು, ಭಾರತದ ವೇಗಿ ಮೊಹಮ್ಮದ್ ಸಿರಾಜ್ ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಗಮನ ಸೆಳೆದಿದ್ದಾರೆ. ಇಂಗ್ಲೆಂಡ್‌ನ ಆಕ್ರಮಣಕಾರಿ ಆಟಕ್ಕೆ ಕಂಗೆಟ್ಟಿದ್ದ ಭಾರತಕ್ಕೆ ಆಸರೆಯಾಗಿ ನಿಂತ ಸಿರಾಜ್, ಇದೀಗ ಕ್ರಿಕೆಟ್ ದಿಗ್ಗಜರಿಂದ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಊಟದ ವಿರಾಮದ ನಂತರ ಸತತವಾಗಿ ಎಂಟು ಓವರ್‌ಗಳ ಸ್ಪೆಲ್ ಮಾಡಿದ ಸಿರಾಜ್, ಇಂಗ್ಲೆಂಡ್ ಬ್ಯಾಟಿಂಗ್‌ನ ಬೆನ್ನೆಲುಬನ್ನೇ ಮುರಿದರು. ಅವರು ಅಪಾಯಕಾರಿ ಆಟಗಾರರಾದ ಓಲಿ ಪೋಪ್, ಜೋ ರೂಟ್ ಮತ್ತು ಯುವ ಆಟಗಾರ ಜಾಕೋಬ್ ಬೆಥೆಲ್ ಅವರ ವಿಕೆಟ್‌ಗಳನ್ನು ಕಬಳಿಸಿ ಪಂದ್ಯದ ಗತಿಯನ್ನೇ ಬದಲಿಸಿದರು. ಒಂದು ಹಂತದಲ್ಲಿ 129 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡು ಬೃಹತ್ ಮೊತ್ತದತ್ತ ಸಾಗುತ್ತಿದ್ದ ಇಂಗ್ಲೆಂಡ್, ಸಿರಾಜ್ ಅವರ ದಾಳಿಗೆ ಸಿಲುಕಿ 242 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಕುಸಿತ ಕಂಡಿತು. ಈ ಸರಣಿಯಲ್ಲಿ ಭಾರತದ ಪರ ಎಲ್ಲಾ ಟೆಸ್ಟ್ ಪಂದ್ಯಗಳಲ್ಲೂ ಆಡಿದ ಏಕೈಕ ವೇಗಿ ಎಂಬ ಹೆಗ್ಗಳಿಕೆಗೂ ಸಿರಾಜ್ ಪಾತ್ರರಾಗಿದ್ದಾರೆ.
ದಿಗ್ಗಜರ ಮೆಚ್ಚುಗೆ
ಸಿರಾಜ್ ಅವರ ಈ ಹೋರಾಟದ ಮನೋಭಾವಕ್ಕೆ ಮಾಜಿ ಕ್ರಿಕೆಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಭಾರತದ ಮಾಜಿ ವೇಗಿ ವರುಣ್ ಆರನ್ ಅವರು, “ಮೊಹಮ್ಮದ್ ಸಿರಾಜ್ ಬಳಿ ಬೇರೆ ಯಾರಿಗಿಂತಲೂ ದೊಡ್ಡದಾದ ಒಂದು ‘ಸ್ನಾಯು’ ಇದೆ, ಅದುವೇ ಅವರ ಹೃದಯ. ಅಂತಹ ಹೃದಯವಿದ್ದಾಗ, ನೀವು ನೋವು ಮತ್ತು ದಣಿವನ್ನು ಮೀರಿ ಇಂತಹ ಸ್ಪೆಲ್‌ಗಳನ್ನು ಮಾಡಬಹುದು. ಐದನೇ ಟೆಸ್ಟ್‌ನಲ್ಲಿ, ಗಂಟೆಗೆ 140 ಕಿ.ಮೀ ವೇಗದಲ್ಲಿ ಸತತ ಎಂಟು ಓವರ್ ಬೌಲ್ ಮಾಡುವುದನ್ನು ನೋಡುವುದೇ ಒಂದು ಅದ್ಭುತ ಅನುಭವ,” ಎಂದು ಹೊಗಳಿದ್ದಾರೆ.
ಇಂಗ್ಲೆಂಡ್‌ನ ದಿಗ್ಗಜ ವೇಗಿ ಸ್ಟುವರ್ಟ್ ಬ್ರಾಡ್ ಕೂಡ ಸಿರಾಜ್ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. “ಸಿರಾಜ್ ಅವರಂತಹ ಬೌಲರ್ ನಿಮ್ಮ ತಂಡದಲ್ಲಿರಬೇಕು ಎಂದು ನೀವು ಬಯಸುತ್ತೀರಿ. ಅವರು ಕೆಲವೊಮ್ಮೆ ರನ್ ಬಿಟ್ಟುಕೊಡಬಹುದು, ಆದರೆ ಅವರು ಹೃದಯದಿಂದ ಬೌಲ್ ಮಾಡುತ್ತಾರೆ, ನಿಮ್ಮ ಮೇಲೆ ನಿರಂತರವಾಗಿ ದಾಳಿ ಮಾಡುತ್ತಾರೆ ಮತ್ತು ಪ್ರಮುಖ ಆಟಗಾರರ ವಿಕೆಟ್ ಪಡೆಯುತ್ತಾರೆ,” ಎಂದು ಬ್ರಾಡ್ ಹೇಳಿದ್ದಾರೆ.
ಸಿರಾಜ್‌ಗೆ ಉತ್ತಮ ಸಾಥ್ ನೀಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಕೂಡ 4 ವಿಕೆಟ್ ಪಡೆದು ಇಂಗ್ಲೆಂಡ್‌ನ ಕುಸಿತಕ್ಕೆ ಪ್ರಮುಖ ಕಾರಣರಾದರು.



















