ಧರ್ಮಸ್ಥಳ ಫೈಲ್ಸ್‌ಗೆ ಮಹತ್ವದ ಪುರಾವೆ ಸಿಕ್ಕಿದ್ದು, 6ನೇ ಪಾಯಿಂಟ್ ನಲ್ಲಿ 12 ಮೂಳೆಗಳು ಪತ್ತೆಯಾಗಿವೆ. ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿಯ ಸುತ್ತ ಶವಗಳನ್ನ ಹೂತಿಟ್ಟ ಪ್ರಕರಣಕ್ಕೆ ಈ ಮೂಲಕ ಮತ್ತಷ್ಟು ಬಲ ಬಂದಿದೆ.
ಆರಂಭಿಕ 5 ಪಾಯಿಂಟ್‌ಗಳಲ್ಲಿ ಯಾವುದೇ ಮೂಳೆಯ ಕುರುಹು ಸಿಗದಿದ್ದಾಗ ಅನಾಮಿಕ ದೂರುದಾರನ ದೂರಿನ ಬಗ್ಗೆ ಸಂಶಯ ವ್ಯಕ್ತವಾಗಿದ್ದವು. ಆದರೆ, ಈಗ ಗುರುವಾರ ಸಂಜೆ ವೇಳೆ 6ನೇ ಪಾಯಿಂಟ್ ನಲ್ಲಿ ಸಿಕ್ಕಿರುವ ಮೂಳೆಗಳು ಪುರುಷನದ್ದು ಎನ್ನಲಾಗಿದೆ. ಉತ್ಖನನ ವೇಳೆ ಸಿಕ್ಕ 12 ಮೂಳೆಗಳನ್ನು ಸಂರಕ್ಷಿಸಿ ಇಡಲಾಗಿದೆ. ಅರಣ್ಯ ಪ್ರದೇಶದಲ್ಲಿ 6ನೇ ಪಾಯಿಂಟ್ ಅಗೆಯಲಾಗಿತ್ತು. ಮೂರು ಅಡಿ ಅಗಿಯುವಾಗ ಎರಡು ಮೂಳೆಗಳು ಪತ್ತೆಯಾಗಿದ್ದವು. ಹಿಟಾಚಿ ಬಳಸಿಕೊಂಡು ಮತ್ತಷ್ಟು ಆಳಕ್ಕಿಳಿದಾಗ 12 ಮೂಳೆಗಳು ಕಂಡು ಬಂದಿವೆ. ಸ್ಥಳದಲ್ಲಿದ್ದ ವೈದ್ಯರು ಹಾಗೂ ಎಫ್‌ಎಸ್‌ಎಲ್ ತಜ್ಞರನ್ನು ಬಳಸಿಕೊಂಡು ಎಲ್ಲಾ ಮೂಳೆಗಳನ್ನು ಸಂರಕ್ಷಿಸಲಾಗಿದೆ. ಶುಕ್ರವಾರ ಬೆಳಗ್ಗೆ 7ನೇ ಪಾಯಿಂಟ್‌ನಿಂದ ಮತ್ತೆ ಅಗೆಯುವ ಕಾರ್ಯ ಆರಂಭವಾಗಲಿದೆ. ಅಲ್ಲದೇ, 8ನೇ ಪಾಯಿಂಟ್‌ನ ಬಳಿ ಎಲ್ಲಾ ಸಿದ್ಧತಾ ಕಾರ್ಯ ನಡೆದಿದೆ.