ನವದೆಹಲಿ: ಭಾರತೀಯ ಪಾಸ್ಪೋರ್ಟ್ ಹೊಂದಿರುವವರಿಗೆ ವೀಸಾ-ಮುಕ್ತ ಸೌಲಭ್ಯವಿದ್ದರೂ, ಮಲೇಷ್ಯಾದ ಗಡಿ ನಿಯಂತ್ರಣ ಮತ್ತು ಸಂರಕ್ಷಣಾ ಸಂಸ್ಥೆ (ಎಕೆಪಿಎಸ್) ಕೌಲಾಲಂಪುರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 10 ಭಾರತೀಯ ಪ್ರಜೆಗಳಿಗೆ ಪ್ರವೇಶವನ್ನು ನಿರಾಕರಿಸಿದ ಘಟನೆ ನಡೆದಿದೆ.
ಅಧಿಕಾರಿಗಳು ನಡೆಸಿದ ಏಳು ಗಂಟೆಗಳ ಸುದೀರ್ಘ ಕಾರ್ಯಾಚರಣೆಯಲ್ಲಿ ಒಟ್ಟು 99 ವಿದೇಶಿ ಪ್ರಯಾಣಿಕರನ್ನು ತಡೆಹಿಡಿಯಲಾಗಿದೆ. ಈ ಕಾರ್ಯಾಚರಣೆಯಲ್ಲಿ ಅಪಾಯಕಾರಿ ಎಂದು ಪರಿಗಣಿಸಲಾದ ವಿಮಾನಗಳ ಮೂಲಕ ಬಂದ 400ಕ್ಕೂ ಹೆಚ್ಚು ಪ್ರಯಾಣಿಕರನ್ನು ತಪಾಸಣೆ ಮಾಡಲಾಗಿತ್ತು. ಪ್ರವೇಶ ನಿರಾಕರಿಸಲ್ಪಟ್ಟವರಲ್ಲಿ 80 ಬಾಂಗ್ಲಾದೇಶಿ ಪ್ರಜೆಗಳು, 10 ಭಾರತೀಯರು ಮತ್ತು 9 ಪಾಕಿಸ್ತಾನಿ ಪ್ರಜೆಗಳು ಸೇರಿದ್ದಾರೆ. ಅವರೆಲ್ಲರೂ ಪುರುಷರು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಪ್ರವೇಶ ನಿರಾಕರಣೆಗೆ ಕಾರಣವೇನು?
ವಲಸೆ ತಪಾಸಣೆಯ ನಿಯಮಗಳನ್ನು ಪಾಲಿಸುವಲ್ಲಿ ವಿಫಲರಾದ ಕಾರಣ ಈ 99 ಜನರನ್ನು ಗಡಿಪಾರು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಅವರ ಮಲೇಷ್ಯಾ ಭೇಟಿಯ ಕಾರಣಗಳು ಅನುಮಾನಾಸ್ಪದವಾಗಿದ್ದವು ಮತ್ತು ಅವರ ಪ್ರಯಾಣದ ದಾಖಲೆಗಳು ಸರಿ ಇರಲಿಲ್ಲ,” ಎಂದು ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಅಸ್ತಿತ್ವದಲ್ಲಿರುವ ಕಾನೂನುಗಳ ಅನ್ವಯ, ಅವರನ್ನು ತಮ್ಮ ಮೂಲ ದೇಶಗಳಿಗೆ ವಾಪಸ್ ಕಳುಹಿಸುವ ಮೊದಲು, ಅವರ ದಾಖಲೆಗಳನ್ನು ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲಿಸಲಾಯಿತು,” ಎಂದು ಸಂಸ್ಥೆ ಹೇಳಿದೆ. ಅಲ್ಲದೆ ಅವರೆಲ್ಲರ ಹಿನ್ನೆಲೆ ಪರಿಶೀಲನೆ, ಪ್ರಯಾಣದ ದಾಖಲೆಗಳ ಪರಿಶೀಲನೆ ನಡೆಸಿದ ಬಳಿಕ, ವೈಯಕ್ತಿಕವಾಗಿಯೂ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು ಎನ್ನಲಾಗಿದೆ.
ಸಾಮಾಜಿಕ ಭೇಟಿ ಪಾಸ್ ಗಳ ದುರ್ಬಳಕೆಯನ್ನು ತಡೆಯಲು ಮತ್ತು ಮಾನವ ಕಳ್ಳಸಾಗಣೆಯನ್ನು ನಿಲ್ಲಿಸಲು ಇಂತಹ ಕಾರ್ಯಾಚರಣೆಗಳನ್ನು ನಿಯಮಿತವಾಗಿ ನಡೆಸಲಾಗುವುದು ಎಂದೂ ಎಕೆಪಿಎಸ್ ಸ್ಪಷ್ಟಪಡಿಸಿದೆ.
ವೀಸಾ-ಮುಕ್ತ ಸೌಲಭ್ಯದ ವಿವರ
ಭಾರತೀಯ ಪ್ರವಾಸಿಗರಿಗಾಗಿ ತನ್ನ ವೀಸಾ-ಮುಕ್ತ ಪ್ರವೇಶ ಸೌಲಭ್ಯವನ್ನು ಈಗಾಗಲೇ ಮಲೇಷ್ಯಾವು ಡಿಸೆಂಬರ್ 31, 2026ರವರೆಗೆ ವಿಸ್ತರಿಸಿದೆ. ಈ ನಿಯಮದ ಅಡಿಯಲ್ಲಿ, ಭಾರತೀಯರು ಯಾವುದೇ ವೀಸಾ ಇಲ್ಲದೆ ಮಲೇಷ್ಯಾದಲ್ಲಿ 30 ದಿನಗಳವರೆಗೆ ಉಳಿದುಕೊಳ್ಳಬಹುದು. ಪ್ರವೇಶ ಪ್ರಕ್ರಿಯೆಯನ್ನು ಸರಳಗೊಳಿಸುವ ಮೂಲಕ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿ, ದೇಶದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಮಾಡುವುದು ಮಲೇಷ್ಯಾ ಸರ್ಕಾರದ ಉದ್ದೇಶವಾಗಿದೆ.



















