ಬೆಂಗಳೂರು : ಅಹವಾಲುಗಳಿಗೆ ಸಚಿವರು ಸ್ಪಂದಿಸುತ್ತಿಲ್ಲ, ಕ್ಷೇತ್ರದ ಅಭಿವೃದ್ಧಿಗೆ ಅನುದಾನ ದೊರಕುತ್ತಿಲ್ಲ ರಾಜ್ಯ ಸರ್ಕಾರದ ಕಾರ್ಯವೈಖರಿ ವಿರುದ್ಧ ಬಹರಿಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವ ಸ್ವಪಕ್ಷೀಯ ಶಾಸಕರ ವಿಶ್ವಾಸ ಗಳಿಸಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯ, ಇಂದಿನಿಂದ ನಾಲ್ಕು ದಿನಗಳ ಕಾಲ ಸಚಿವರು, ಶಾಸಕರೊಂದಿಗೆ ಜೊತೆ ಸರಣಿ ಸಭೆ ನಡೆಸಲಿದ್ದಾರೆ.
ಜಿಲ್ಲಾವಾರು ಶಾಸಕರ ಜೊತೆ ಸಭೆ ನಡೆಸಲಿರುವ ಸಿಎಂ ಸಿದ್ದರಾಮಯ್ಯ, ಕುಂದುಕೊರತೆಗಳನ್ನು ಆಲಿಸಲಿದ್ದಾರೆ. ಜೊತೆಗೆ, ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಸಚಿವಾಲಯ ಮಾಹಿತಿ ನೀಡಿದೆ.
ಮೊದಲ ದಿನ ಸಂಜೆ 5 ಗಂಟೆಗೆ ತವರು ಜಿಲ್ಲೆ ಮೈಸೂರಿನ ಶಾಸಕರ ಜೊತೆ ಸಭೆ ಆರಂಭಿಸಲಿರುವ ಮುಖ್ಯಮಂತ್ರಿ, ಬಳಿಕ ಚಾಮರಾಜನಗರ, ತುಮಕೂರು, ಕೊಡಗು, ದಕ್ಷಿಣ ಕನ್ನ ಜಿಲ್ಲೆಗಳ ಶಾಸಕರು ಮತ್ತು ಆ ಜಿಲ್ಲೆಗಳ ಉಸ್ತುವಾರಿ ಸಚಿವರ ಜೊತೆ ಸಭೆ ನಡೆಸಲಿದ್ದಾರೆ. ಸಚಿವರು, ಶಾಸಕರ ಜೊತೆ ಅವರು ಸುಮಾರು 30 ನಿಮಿಷಗಳಿಂದ ಒಂದು ಗಂಟೆ ಮುಖಾಮುಖಿ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಾಸಕರಾ ಬಿ. ಆರ್. ಪಾಟೀಲ್ ಹಾಗೂ ರಾಜು ಕಾಗೆ ಸ್ವಪಕ್ಷದ ಸಚಿವರ ವಿರುದ್ಧವೇ ಆರೋಪ ಹೊರಿಸಿದ ಬೆನ್ನಲ್ಲೇ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರು, ಶಾಸಕರು ಹಾಗೂ ಸಚಿವರ ಜೊತೆ ಸರಣಿ ಸಭೆ ನಡೆಸಿದ್ದರು. ಸುರ್ಜೆವಾಲ ಸಭೆ ಕೂಡ ರಾಜಕೀಯ ಚರ್ಚೆಗೆ ಕಾರಣವಾಗಿತ್ತು. ಸುರ್ಜೇವಾಲ ಸಿಎಂ ಅವರಂತೆ ವರ್ತಿಸುತ್ತಿದ್ದಾರೆಂದು ಸಹಕಾರ ಸಚಿವ ರಾಜಣ್ಣ ಗಂಭೀರ ಆರೋಪ ಮಾಡಿದ್ದರು.



















