ಬೆಂಗಳೂರು: ಬೆಳ್ಳಂ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಬೆಂಗಳೂರು, ಹಾಸನ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಬೆಂಗಳೂರಿನ ಕಂದಾಯ ಅಧಿಕಾರಿ ವೆಂಕಟೇಶ್, ಬಿಡಿಎ ಕಚೇರಿಯ ಸಿನಿಯರ್ ಅರ್ಟಿಕಲ್ಚರ್ ಡೈರೆಕ್ಟರ್, ಓಂ ಪ್ರಕಾಶ್, ರಾಷ್ಟ್ರೀಯ ಹೆದ್ದಾರಿ (NHAI) ಹಾಸನ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಜಯಣ್ಣ, ಚಿಕ್ಕಬಳ್ಳಾಪುರದ ಜ್ಯೂನಿಯರ್ ಎಂಜಿನಿಯರ್ ಆಂಜನೇಯ ಮೂರ್ತಿ, ಚಿತ್ರದುರ್ಗದ ತಾಲೂಕು ಆರೋಗ್ಯಾಧಿಕಾರಿ ವೆಂಕಟೇಶ್ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ ಆರೋಪ ಹಿನ್ನೆಲೆ ರೇಡ್ ಮಾಡಲಾಗಿದೆ.
ಚಿತ್ರದುರ್ಗದ ಟಿಎಚ್‌ಓ (THO) ಡಾ.ವೆಂಕಟೇಶ್ ಮನೆ ಮೇಲೆ ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಹಿರಿಯೂರು ಪಟ್ಟಣದ ಯರಗುಂಟೇಶ್ವರ ಬಡಾವಣೆಯ ಮನೆ, ಆದಿವಾಲ ಗ್ರಾಮದ ಮನೆ & ಕ್ಲಿನಿಕ್ ಮೇಲೆ ದಾಳಿ ನಡೆಸಲಾಗಿದೆ. ಆದಾಯಕ್ಕೂ ಮೀರಿದ ಆಸ್ತಿಗಳಿಕೆ ಆರೋಪದ ಹಿನ್ನೆಲೆ ದಾಳಿ ನಡೆಸಿದ್ದು, ದಾಖಲೆಗಳನ್ನ ಪರಿಶೀಲಿಸಲಾಗುತ್ತಿದೆ. ಇತ್ತಾ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಜೆಇ ಆಂಜನೇಯಮೂರ್ತಿ ಮನೆ ಮೇಲೆ ಅಧಿಕಾರಿಗಳು ರೇಡ್ ಮಾಡಿದ್ದು, ಯಲಹಂಕ ನ್ಯೂ ಟೌನ್‌ನಲ್ಲಿರುವ ಮನೆ ಹಾಗೂ ಸ್ವಗ್ರಾಮ ತುಮಕೂರಿನ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ತೀವ್ರ ತಪಾಸಣೆ ಹಿನ್ನೆಲೆ ಗೌರಿಬಿದನೂರು ಕಚೇರಿ ಮೇಲೂ ಲೋಕಾ ಪೊಲೀಸರ ದಾಳಿ ನಡೆದಿದೆ.
ಇತ್ತಾ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌ಎಐ) ಹಾಸನ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಜಯಣ್ಣ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಎಸ್ಪಿ ಸ್ನೇಹಾ ನೇತೃತ್ವದಲ್ಲಿ ಹಾಸನ ಡಿವೈಎಸ್‌ಪಿ, ಇನ್ಸ್‌ಪೆಕ್ಟರ್ ಹಾಗೂ ಚಿಕ್ಕಮಗಳೂರು ಲೋಕಾಯುಕ್ತ ಡಿವೈಎಸ್‌ಪಿ, ಇನ್ಸ್‌ಪೆಕ್ಟರ್‌ಗಳ ನೇತೃತ್ವದ ತಂಡ ದಾಳಿ ನಡೆಸಿದೆ.
ಹಾಸನ ನಗರದ ಚನ್ನಪಟ್ಟಣ ಹೌಸಿಂಗ್ ಬೋರ್ಡ್ನಲ್ಲಿರುವ ಜಯಣ್ಣ ನಿವಾಸ, ಪತ್ನಿ ನಿವಾಸ, ಹಾರ್ಡ್ವೇರ್ ಅಂಗಡಿ, ಇತರೆ ಎರಡು ಕಡೆಗಳಲ್ಲಿ ದಾಳಿ ನಡೆಸಿ ಶೋಧ ನಡೆಸಲಾಗುತ್ತಿದೆ.