ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತುಹಾಕಿದ ಪ್ರಕರಣದ (ಸಂಖ್ಯೆ 39/2025 ) ಸಾಕ್ಷಿ ದೂರುದಾರ, ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪದಲ್ಲಿ 13 ಜಾಗಗಳನ್ನು ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳಿಗೆ ತೋರಿಸಿದರು.
ಮುಖಗವಸು ಹಾಕಿದ್ದ ಸಾಕ್ಷಿ ದೂರುದಾರ ತೋರಿಸಿದ ಒಂದೊಂದು ಜಾಗದ ಜಿಪಿಎಸ್ ಗುರುತುಗಳನ್ನು ದಾಖಲಿಸಿಕೊಂಡ ಎಸ್‌ಐಟಿ ಅಧಿಕಾರಿಗಳು ಅಲ್ಲಿ ಕೆಂಪು ರಿಬ್ಬನ್ ಕಟ್ಟಿದರು. ಆತ ತೋರಿಸುತ್ತಾ ಹೋದ ಪ್ರತಿ ಜಾಗವನ್ನೂ ನಿರ್ದಿಷ್ಟ ಸಂಖ್ಯೆಯ ಮೂಲಕ ಗುರುತು ಮಾಡಿದರು. ಸಾಕ್ಷಿ ದೂರುದಾರನ ಮುಖಗವಸಿಗೆ SIT ಅಧಿಕಾರಿಗಳು ಗೆರೆ ಎಳೆದು, ಮುಖಗವಸು ಇದ್ದರೂ ಸಾಕ್ಷಿ ದೂರುದಾರನ ಮುಖ ಪರಿಚಯಕ್ಕೆ ಗೊತ್ತಾಗದಂತೆ ಮುಂಜಾಗ್ರತೆ ವಹಿಸಿರುವುದು ವಿಶೇಷ.
ಎಸ್‌ಐಟಿ ಅಧಿಕಾರಿಗಳು, ವಿಧಿ ವಿಜ್ಞಾನ ತಜ್ಞರು (ಸೀನ್ ಆಫ್ ಕ್ರೈಂ ಅಧಿಕಾರಿಗಳು) ಹಾಗೂ ಭದ್ರತಾ ಸಿಬ್ಬಂದಿ ಸಾಕ್ಷಿ ದೂರುದಾರನ ಜೊತೆ ಸುಮಾರು ಎರಡು ಕಿ.ಮೀ ದೂರದ ಮುಂಡಾಜೆ ಮೀಸಲು ಅರಣ್ಯಕ್ಕೆ ಸೇರಿದ ಕಾಡಿನಲ್ಲಿ ಅಲೆದರು. ಎಸ್‌ಐಟಿಯ ಸಿಬ್ಬಂದಿ ಆತ ತೋರಿಸಿದ ಜಾಗಗಳ ವಿಡಿಯೊ ಚಿತ್ರೀಕರಣ ಮಾಡಿಕೊಂಡರು.
ಸಾಕ್ಷಿ ದೂರುದಾರ ಸೋಮವಾರ ತೋರಿಸಿರುವ 13 ಜಾಗಗಳೂ ಧರ್ಮಸ್ಥಳ ಪೊಲೀಸ್ ಠಾಣೆಯಿಂದ 1 ಕಿ.ಮೀ ವ್ಯಾಪ್ತಿಯ ಕಾಡಿನಲ್ಲಿವೆ. ಮೊದಲು ತೋರಿಸಿದ ಎಂಟು ಜಾಗಗಳು ನೇತ್ರಾವತಿ ನದಿ ದಂಡೆಯಲ್ಲಿದ್ದರೆ, ಉಳಿದ ನಾಲ್ಕು ಜಾಗಗಳು ನೇತ್ರಾವತಿ ಸೇತುವೆಯಿಂದ ಸ್ನಾನಘಟ್ಟದ ಕಡೆಗೆ ರಾಜ್ಯ ಹೆದ್ದಾರಿ-37ರ ಪಕ್ಕದಲ್ಲಿವೆ. ಒಂದು ಜಾಗ ಮಾತ್ರ ಸ್ನಾನಘಟ್ಟ ಸಮೀಪದ ಕಿರು ಅಣೆಕಟ್ಟೆಯ ಪಕ್ಕದ ಬಯಲು ಜಾಗದಲ್ಲಿದೆ.
ವಿಶೇಷ ತನಿಖಾ ತಂಡದ ಡಿಐಜಿ ಎಂ.ಎನ್. ಅನುಚೇತ್ ಅವರು ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಭೇಟಿ ನೀಡಿ ತನಿಖೆಯ ಬಗ್ಗೆ ಮಾರ್ಗದರ್ಶನ ಮಾಡಿದರು. ಆಂತರಿಕ ಭದ್ರತಾ ವಿಭಾಗದ ಎಸ್.ಪಿ ಜಿತೇಂದ್ರ ಕುಮಾರ್ ದಯಾಮ ಹಾಗೂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಮಂಗಳೂರು ವಲಯದ ಎಸ್.ಪಿ ಸಿ.ಎ.ಸೈಮನ್ ಮತ್ತಿತರ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.
ಸಾಕ್ಷಿ ದೂರುದಾರರನ್ನು ಮಂಗಳೂರಿನ ಮಲ್ಲಿಕಟ್ಟೆಯ ಪ್ರವಾಸಿ ಬಂಗಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಶನಿವಾರ ಮತ್ತು ಭಾನುವಾರ ವಿಚಾರಣೆಗೆ ಒಳಪಡಿಸಿದ್ದರು. ಎಸ್‌ಐಟಿ ಮುಖ್ಯಸ್ಥರಾಗಿರುವ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ಅವರು ತನಿಖೆಯ ಬಗ್ಗೆ ಎಸ್‌ಐಟಿ ಅಧಿಕಾರಿಗಳಿಗೆ ಭಾನುವಾರ ಮಾರ್ಗದರ್ಶನ ಮಾಡಿದ್ದರು.