ಬೆಂಗಳೂರು: ‘ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸುವುದು, ಕರಾವಳಿಯನ್ನು ಪ್ರವಾಸಿ ಕೇಂದ್ರವನ್ನಾಗಿ ಮಾಡುವುದು ನಮ್ಮ ಆದ್ಯತೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕುಂದಾಪ್ರ ಕನ್ನಡ ಹಬ್ಬದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಕುಂದಾಪುರ ಭಾಗದ ಬೈಂದೂರಿನಲ್ಲಿ ವಿಮಾನ ನಿಲ್ದಾಣ ಬೇಕು ಎಂಬ ಬೇಡಿಕೆಯ ಬಗ್ಗೆ ಆಮೇಲೆ ನೋಡೋಣ. ಮೊದಲು ಪ್ರವಾಸಿ ತಾಣವಾಗಲಿ. ಕರಾವಳಿಯ ಜನರಿಗೆ ಅಲ್ಲೇ ಉದ್ಯೋಗ ಸಿಗುವಂತಾಗಬೇಕು. ಅಲ್ಲಿನ ಸಂಪ್ರದಾಯ, ಸಂಸ್ಕೃತಿಯನ್ನು ಅಲ್ಲಿಂದಲೇ ಲೋಕಕ್ಕೆ ತಿಳಿಸುವ ಕೆಲಸಗಳಾಗಬೇಕು. ಅದಕ್ಕಾಗಿ 340 ಕಿ.ಮೀ. ಉದ್ದದ ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದಿದ್ದಾರೆ.
‘ಬಿಬಿಎಂಪಿಯನ್ನು ಐದು ಭಾಗ ಮಾಡಿದಾಗ ಕೆಲವರು ಆಕ್ಷೇಪಿಸಿದ್ದರು. ಆದರೆ, ಇದು ಕರ್ನಾಟಕದ ಹೃದಯ ಭಾಗ. ದಕ್ಷಿಣ ಕನ್ನಡ, ಉಡುಪಿ ಸೇರಿ ಎಲ್ಲ ಭಾಗದ ಜನರ ಕೇಂದ್ರ ಸ್ಥಳವಿದು, ಹೊರಗಡೆಯವರು ಅನ್ನೋ ಭಯ ಯಾರಿಗೂ ಬೇಡ’ ಎಂದು ಹೇಳಿದ್ದಾರೆ.
ರಕ್ಷಿತಾ ಮಾತನಾಡಿ, ‘ನನ್ನ ತಂದೆಯ ಊರು ದಾವಣಗೆರೆ, ತಾಯಿಯ ಊರು ಕುಂದಾಪುರ. ಭಾಷೆಯನ್ನು ಹಬ್ಬದ ರೀತಿಯಲ್ಲಿ ಆಚರಿಸುವುದು ಹೆಮ್ಮೆಯ ಸಂಗತಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಊರ ಗೌರವ’ ವಿಶೇಷ ಪುರಸ್ಕಾರ ಸ್ವೀಕರಿಸಿದ ಚಿತ್ರನಿರ್ದೇಶಕ ಯೋಗರಾಜ್ ಭಟ್ ಮಾತನಾಡಿ, ‘ಊರು ಅಂದ್ರೆ ವ್ಯಕ್ತಿಗಿಂತ ದೊಡ್ಡದು. ಜನ್ಮ ಕೊಟ್ಟ ಊರು ಎಲ್ಲರಿಗಿಂತ ದೊಡ್ಡದು, ಊರು-ಭಾಷೆ ಹೆಸರೇ ನನ್ನನ್ನು ಇಲ್ಲಿ ತಂದು ನಿಲ್ಲಿಸಿದೆ. ಕುಂದಾಪುರದ ತಂತ್ರಾಡಿ ನಾನು ಹುಟ್ಟಿದ ಊರು. ತಾಯಿ ತುಳು ಭಾಷೆಯವರು, ತಂದೆಯದ್ದು ಕುಂದಾಪ್ರರ ಕನ್ನಡ’ ಎಂದು ಹೇಳಿದ್ದಾರೆ.
‘ತಂದೆ-ತಾಯಿಗೆ ನಾನು ಒಂಬತ್ತನೇ ಮಗ, ನಾನು ಹುಟ್ಟುವ ಮೊದಲೇ ತಾಯಿಗೆ ತಂದೆ ಕುಂದಾಪ್ರ ಕನ್ನಡ ಕಲಿಸಿದ್ದರು. ಹೀಗಾಗಿ ನಾನು ಬೆಳೆದದ್ದು ಧಾರವಾಡ ಜಿಲ್ಲೆಯಾದ್ರೂ ಮನೆಯಲ್ಲಿ ಕುಂದಾಪ್ರದ ವಾತಾವರಣ ಇತ್ತು’ ಎಂದು ನೆನಪು ಮಾಡಿಕೊಂಡಿದ್ದಾರೆ.



















