ಉಡುಪಿ: ‘ಕರಾವಳಿಯ ತಾಯಂದಿರೇ ನಿಮ್ಮ ಮಕ್ಕಳ ಮಿದುಳನ್ನು ರಾಜಕಾರಣಿಗಳ, ಕೋಮುವಾದಿಗಳ ಕೈಗೆ ಕೊಡಬೇಡಿ. ಅವರನ್ನು ಭಾರತದ ಸಂವಿಧಾನದ ಪ್ರಕಾರ ಬೆಳೆಸಲು ಪ್ರಯತ್ನಿಸಿ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ರಥಬೀದಿ ಗೆಳೆಯರು ಉಡುಪಿ ವತಿಯಿಂದ ನಗರದ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ನಿರಂಜನರ ನೂರರ ನೆನಪು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕರಾವಳಿಯ ತಾಯಂದಿರಿಗೆ ನೆಮ್ಮದಿಯನ್ನು ಯಾವಾಗ ತಂದು ಕೊಡುವುದು?. ಅವರ ಮಕ್ಕಳು ಕೊಲೆಯಾಗುತ್ತಿರುವಾಗ ಯಾರು ಉತ್ತರ ಕೊಡುತ್ತಾರೆ?. ಇದು ಎಷ್ಟು ಮಂದಿ ತಾಯಂದಿರಿಗೆ ನೋವನ್ನು ಉಂಟು ಮಾಡುತ್ತಿದೆ ಎಂದು ಆಲೋಚನೆ ಮಾಡಿದ್ದೀರಾ’ ಎಂದರು.
‘ತಾಯಂದಿರು ತಮ್ಮ ಮಕ್ಕಳಿಗೆ ಇನ್ನೊಬ್ಬರನ್ನು ಹೇಗೆ ಪ್ರೀತಿಸಬೇಕು, ಗೌರವಿಸಬೇಕು ಎಂಬುದನ್ನು ಕಲಿಸಿಕೊಡುವ ಮೂಲಕ ನಿಮ್ಮ ಮಕ್ಕಳನ್ನು ಕಾಪಾಡಿಕೊಳ್ಳಿ’ ಎಂದರು.