ಬ್ಯಾಂಕಾಕ್/ನಾಮ್ ಪೆನ್: ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವಿನ ಗಡಿ ಪ್ರದೇಶದಲ್ಲಿ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಕಾಂಬೋಡಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿ ವಾಸಿಸುತ್ತಿರುವ ತನ್ನ ಪ್ರಜೆಗಳಿಗಾಗಿ ಶನಿವಾರ ಮಹತ್ವದ ಸೂಚನೆಯೊಂದನ್ನು ಹೊರಡಿಸಿದೆ. ಗಡಿ ಪ್ರದೇಶಗಳಿಗೆ ಅನಗತ್ಯವಾಗಿ ಪ್ರಯಾಣ ಬೆಳೆಸದಂತೆ ಭಾರತೀಯರಿಗೆ ಕಟ್ಟುನಿಟ್ಟಿನ ಸಲಹೆ ನೀಡಿದೆ.
ರಾಯಭಾರ ಕಚೇರಿಯು ತುರ್ತು ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆಯನ್ನೂ ಹಂಚಿಕೊಂಡಿದೆ. “ಕಾಂಬೋಡಿಯಾ-ಥಾಯ್ಲೆಂಡ್ ಗಡಿಯಲ್ಲಿ ನಡೆಯುತ್ತಿರುವ ಘರ್ಷಣೆಗಳ ದೃಷ್ಟಿಯಿಂದ, ಭಾರತೀಯ ಪ್ರಜೆಗಳು ಗಡಿ ಪ್ರದೇಶಗಳಿಗೆ ಪ್ರಯಾಣಿಸಬಾರದು” ಎಂದು ರಾಯಭಾರ ಕಚೇರಿ ತಿಳಿಸಿದೆ. “ಯಾವುದೇ ತುರ್ತು ಪರಿಸ್ಥಿತಿಯಲ್ಲಿ, ಭಾರತೀಯರು ನಾಮ್ ಪೆನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು +855 92881676 ದೂರವಾಣಿ ಸಂಖ್ಯೆ ಅಥವಾ cons.phnompenh@mea.gov.in ಇಮೇಲ್ ಮೂಲಕ ಸಂಪರ್ಕಿಸಬಹುದು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸಾವಿನ ಸಂಖ್ಯೆ 32ಕ್ಕೆ ಏರಿಕೆ
ಕಾಂಬೋಡಿಯಾ ಮತ್ತು ಥಾಯ್ಲೆಂಡ್ ನಡುವಿನ ಗಡಿ ಸಂಘರ್ಷದಲ್ಲಿ ಎರಡೂ ಕಡೆಗಳಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 32ಕ್ಕೆ ಏರಿದೆ. ಶನಿವಾರ ಕಾಂಬೋಡಿಯಾದ ಅಧಿಕಾರಿಗಳು 12 ಹೊಸ ಸಾವುಗಳನ್ನು ದೃಢಪಡಿಸಿದ್ದು, ಅವರಲ್ಲಿ 7 ಮಂದಿ ನಾಗರಿಕರು ಮತ್ತು 5 ಸೈನಿಕರು ಸೇರಿದ್ದಾರೆ. ಥಾಯ್ಲೆಂಡ್‌ನ 6 ಸೈನಿಕರು ಮತ್ತು 13 ನಾಗರಿಕರು ಸಾವನ್ನಪ್ಪಿದ್ದು, 29 ಸೈನಿಕರು ಹಾಗೂ 30 ನಾಗರಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಥಾಯ್ಲೆಂಡ್‌ನಲ್ಲಿನ ರಾಯಭಾರ ಕಚೇರಿಯೂ ಎಚ್ಚರಿಕೆ
ಇದಕ್ಕೂ ಮುನ್ನ ಶುಕ್ರವಾರ, ಥಾಯ್ಲೆಂಡ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಹ ಭಾರತೀಯರಿಗೆ ಎಚ್ಚರಿಕೆಯ ಸಂದೇಶ ನೀಡಿತ್ತು. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಏಳು ಪ್ರಾಂತ್ಯಗಳಿಗೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ಮತ್ತು ಜಾಗರೂಕರಾಗಿರುವಂತೆ ಸಲಹೆ ನೀಡಿತ್ತು.
ಕದನ ವಿರಾಮಕ್ಕೆ ಕಾಂಬೋಡಿಯಾ ಕರೆ
ಈ ಮಧ್ಯೆ, ಕಾಂಬೋಡಿಯಾವು “ತಕ್ಷಣವೇ ಬೇಷರತ್ ಕದನ ವಿರಾಮ”ಕ್ಕೆ ಕರೆ ನೀಡಿದೆ ಎಂದು ವಿಶ್ವಸಂಸ್ಥೆಯಲ್ಲಿರುವ ಅದರ ರಾಯಭಾರಿ ತಿಳಿಸಿದ್ದಾರೆ. ಮಲೇಷ್ಯಾವು ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿದ್ದು, ಕದನ ವಿರಾಮ ಪ್ರಸ್ತಾಪಕ್ಕೆ ಥಾಯ್ಲೆಂಡ್ ಆರಂಭದಲ್ಲಿ ಒಪ್ಪಿ ನಂತರ ಹಿಂದೆ ಸರಿದಿದೆ ಎಂದು ಕಾಂಬೋಡಿಯಾದ ನಾಯಕರು ಆರೋಪಿಸಿದ್ದಾರೆ.



















