ಬೆಂಗಳೂರು : ಬೆಂಗಳೂರಲ್ಲಿ ಜುಲೈ 26-27ರಂದು ಕುಂದಾಪ್ರ ಕನ್ನಡ ಹಬ್ಬ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಉದ್ಘಾಟನೆ ನಡೆಸಲಿದ್ದಾರೆ ಎಂದು ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ಡಾ.ದೀಪಕ್ ಶೆಟ್ಟಿ ಬಾರ್ಕೂರು ಹೇಳಿದ್ದಾರೆ.
ಬೆಂಗಳೂರಿನನಲ್ಲಿ ಕುಂದಾಪುರ ಕನ್ನಡ ಪ್ರತಿಷ್ಠಾನದ ಪದಾಧಿಕಾರಿಗಳೊಂದಿಗೆ ಸುದ್ದಿಗೋಷ್ಟಿ ನಡೆಸಿದ ಅವರು, ಇದು ಆರನೇ ಕುಂದಾಪ್ರ ಕನ್ನಡ ಹಬ್ಬವಾಗಿದ್ದು, ಜುಲೈ 26 ಶನಿವಾರ ಸಂಜೆ ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಂದಾಪ್ರ ಕನ್ನಡ ಅಧ್ಯಯನ ಪೀಠವನ್ನು ಉದ್ಘಾಟಿಸಲಿದ್ದಾರೆ. ಎರಡು ದಿನಗಳ ಈ ಸಮಾರಂಭ ನಡೆಯಲಿದ್ದು,ಎಲ್ಲರಿಗೂ ಉಚಿತಪ್ರವೇಶ ಇರಲಿದೆ.ಈ ಭಾರಿ ನಟರಾದ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ಪ್ರವೀರ್ ಶೆಟ್ಟಿ, ಶೈನ್ ಶೆಟ್ಟಿ, ಸಂಗೀತ ನಿರ್ದೇಶಕ ರವಿ ಬಸ್ರೂರು, ನಟಿ ರಕ್ಷಿತಾ ಪ್ರೇಮ್ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರೂ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಇದು ಕುಂದಾಪ್ರ ಕನ್ನಡ ಹಬ್ಬವಾದರೂ ಸಮಸ್ತ ಕನ್ನಡಿಗರ ಸಂಭ್ರಮ, ಇದು ಪ್ರವೇಶ ಉಚಿತವಾಗಿರುವ ಸಮಾರಂಭವಾಗಿದ್ದು, ಎಲ್ಲರಿಗೂ ಮುಕ್ತ ಆಹ್ವಾನ ಇರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಹಾಗೇ ಕುಂದಾಪ್ರ ಕನ್ನಡ ಪ್ರತಿಷ್ಠಾನ ಕಾರ್ಯದರ್ಶಿ ರಾಘವೇಂದ್ರ ಕಾಂಚನ್ ಮಾತನಾಡಿ, ಎರಡು ದಿನಗಳಲ್ಲಿ 400ಕ್ಕೂ ಹೆಚ್ಚು ಕಲಾವಿದರು ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನೆ ಕಾರ್ಯಕ್ರಮಗಳನ್ನು ನೀಡಲಿದ್ದಾರೆ. ಅಟ್ಟಣಿಗೆ ಆಟ ಎನ್ನುವ ವಿಶೇಷ ಯಕ್ಷಗಾನ ಪ್ರದರ್ಶನ ಇರಲಿದ್ದು, ಕುಂದಾಪುರದ ಅಪರೂಪದ ವಿಶೇಷದ ಖಾದ್ಯಗಳ ಆಹಾರ ಮೇಳ, ಕುಂದಾಪುರದ್ದೇ ಆದ ವಿಶೇಷ ವಸ್ತುಗಳು ಸಿಗುವ ಕುಂದಾಪುರ ಸಂತೆ ಕೂಡ ಇರಲಿದೆ ಎಂದರು.ರಘ ದೀಕ್ಷಿತ್ ಸಂಗೀತ ಸಂಜೆ,ಸಾವಿರ ಹಣ್ಣಿನ ವಸಂತ,ವಿಧ್ಯಾಭೂಷಣ್ ಅವರ ಪಿಳ್ಳಂಗೋವಿಯ ಚಲುವ ಕೃಷ್ಣನ ಕಾರ್ಯಕ್ರಮ,ಹುಲಿ ಕುಣಿತ, ಕೊರಗರ ಡೋಲುವಾದನ, ಹೋಳಿ ಕುಣಿತ, ಬ್ಯಾಂಡ್ ಸೆಟ್, ಬಿಡಿ ಪಟಾಕಿ, ಕುಂದಾಪುರದ ವಿಶೇಷ ವಸ್ತುಗಳು ಸಿಗುವ ಕುಂದಾಪ್ರ ಸಂತೆ ಹಾಗೂ ಕುಂದಾಪುರದ ಡಿಜಿಟಲ್ ಟೂರ್ ‘ಇಲ್ಕಾಣಿ ಕುಂದಾಪ್ರ’ ಇರಲಿವೆ ಎಂದರು.
ಈ ಸುದ್ದಿಗೋಷ್ಠಿಯಲ್ಲಿ ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯ ಹೆಗ್ಡೆ, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ ಹಾಗೂ ಎಚ್. ಅಮರನಾಥ್ ಶೆಟ್ಟಿ, ಸಿಎ ವಿಜಯ್ ಶೆಟ್ಟಿ, ಪ್ರಸಾದ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.