ಬೆಂಗಳೂರು : ಮಹಾದಾಯಿ ಯೋಜನೆಗೆ ಕೇಂದ್ರ ಅರಣ್ಯ ಇಲಾಖೆ ಅನುಮತಿ ನೀಡುವುದಿಲ್ಲ ಎಂಬ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿಕೆ ಖಂಡನೀಯ. ಸುಪ್ರೀಂ ಕೋರ್ಟ್ ನಲ್ಲಿ ನಾವು ಸಲ್ಲಿಸಿರುವ ಅರ್ಜಿ ಹಿಂಪಡೆದು, ಶೀಘ್ರವೇ ಕಾಮಗಾರಿ ಆರಂಭಿಸುತ್ತೇವೆ. ಅವರು ಅದನ್ನು ತಡೆದು ನೋಡಲಿ, ನಾನೂ ನೋಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಗರಂ ಆಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಮಹದಾಯಿ ಯೋಜನೆ ಆರಂಭಿಸಲು ಅನುಮತಿ ನೀಡುವುದಿಲ್ಲ ಎಂದು ಗೋವಾ ಸಿಎಂ ನೀಡಿರುವ ಬಗ್ಗೆ ವರದಿಗಾರರು ಗಮನ ಸೆಳೆದಾಗ ಅವರು ಗುಡುಗಿದ್ದಾರೆ.
ಗೋವಾ ಸಿಎಂ ಮಾನಸಿಕ ಸ್ಥೀಮಿತ ಕಳೆದುಕೊಂಡು ಈ ರೀತಿ ಮಾತನಾಡಿದ್ದಾರೆ. ಅವರಿಗೆ ದೇಶಕ್ಕೆ ಒಕ್ಕೂಟ ವ್ಯವಸ್ಥೆ ಮೇಲೆ ಗೌರವವಿಲ್ಲ. ಮಹಾದಾಯಿ ವಿಚಾರದಲ್ಲಿ ನ್ಯಾಯಮಂಡಳಿಯ ತೀರ್ಪು ಹೊರಬಿದ್ದಿದೆ. ಯೋಜನೆ ಜಾರಿಗೆ ಸಂಬಂಧಿಸಿದಂತೆ ಟೆಂಡರ್ ಕರೆಯಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ, ಸ್ಥಳೀಯ ಸಂಸದರು ಹಾಗೂ ಕೇಂದ್ರದ ಹಾಲಿ ಸಚಿವ ಪ್ರಹ್ಲಾದ್ ಜೋಷಿ ಅವರು ಈ ಯೋಜನೆ ಜಾರಿಯಾಗಲಿದೆ ಎಂದು ಸಂಭ್ರಮಾಚರಣೆ ಮಾಡಿದ್ದರು ಎಂದಿದ್ದಾರೆ.
ನಮ್ಮ ರಾಜ್ಯದ 28 ಲೋಕಸಭೆ ಸದಸ್ಯರು, 12 ರಾಜ್ಯಸಭೆ ಸದಸ್ಯರು ಒಗ್ಗಟ್ಟಿನಿಂದ ಹೋರಾಡಿ ರಾಜ್ಯದ ಗೌರವ ಕಾಪಾಡಬೇಕಿದೆ. ಗೋವಾದ ಕೇವಲ ಒಂದು ಸಂಸದರಿಗಾಗಿ ನಮ್ಮ ಕರ್ನಾಟಕವನ್ನು ಮಾರಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನಾನು ಕೂಡ ಕೇಂದ್ರ ಜಲಶಕ್ತಿ ಸಚಿವರು ಹಾಗೂ ಪ್ರಧಾನಿಗಳನ್ನು ಭೇಟಿ ಮಾಡಲು ಅವಕಾಶ ಕೇಳುತ್ತೇನೆ. ಎಲ್ಲಾ ಸಂಸದರ ನಿಯೋಗವನ್ನು ಕರೆದೊಯ್ಯುವ ಪ್ರಯತ್ನ ಮಾಡುತ್ತೇನೆ. ಯಾರು ಬರುತ್ತಾರೋ ಇಲ್ಲವೋ ನಮ್ಮ ಕೆಲಸ ನಾವು ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.



















