ಜಬಲ್ಪುರ (ಮಧ್ಯಪ್ರದೇಶ): ಎರಡು ಕುದುರೆಗಳು ರಸ್ತೆಯಲ್ಲಿ ರೋಷಾವೇಶದಿಂದ ಕಾದಾಡಿದ್ದು, ಕಾದಾಟದ ಭರದಲ್ಲಿ ಒಂದು ಕುದುರೆಯು ಚಲಿಸುತ್ತಿದ್ದ ಇ-ರಿಕ್ಷಾದೊಳಗೆ ನುಗ್ಗಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ವಿಲಕ್ಷಣ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ.
ನಗರದ ಅತ್ಯಂತ ಜನನಿಬಿಡ ಪ್ರದೇಶವಾದ ನಾಗರಥ್ ಚೌಕ್‌ನಲ್ಲಿ ಬುಧವಾರ ಈ ಘಟನೆ ನಡೆದಿದೆ. ಎರಡು ಕುದುರೆಗಳು ರಸ್ತೆಯಲ್ಲೇ ತೀವ್ರವಾಗಿ ಕಾದಾಟ ಆರಂಭಿಸಿದ್ದು, ಸ್ಥಳೀಯರು ಅವುಗಳನ್ನು ಓಡಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ. ತಮ್ಮ ಜಗಳದ ಭರದಲ್ಲಿ, ಕುದುರೆಗಳು ಹತ್ತಿರದ ಶೋರೂಂ ಒಂದಕ್ಕೆ ನುಗ್ಗಿ, ಅಲ್ಲಿದ್ದ ವಸ್ತುಗಳನ್ನು ಹಾನಿಗೊಳಿಸಿ, ಮತ್ತೆ ರಸ್ತೆಗೆ ಬಂದಿವೆ.
ಈ ಗೊಂದಲದ ನಡುವೆಯೇ, ಪ್ರಯಾಣಿಕರನ್ನು ಹೊತ್ತ ಇ-ರಿಕ್ಷಾವೊಂದು ಅದೇ ಸ್ಥಳವನ್ನು ದಾಟುತ್ತಿದ್ದಾಗ, ಕ್ರೋಧಗೊಂಡ ಕುದುರೆಗಳಲ್ಲೊಂದು ಚಲಿಸುತ್ತಿದ್ದ ವಾಹನದೊಳಗೆ ನೇರವಾಗಿ ನೆಗೆದಿದೆ. ಇದರ ರಭಸಕ್ಕೆ ಆಟೋ ಚಾಲಕ ಮತ್ತು ಓರ್ವ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ನೆರವಿಗೆ ಧಾವಿಸಿದ ಸ್ಥಳೀಯರು, ಗಾಯಾಳುಗಳನ್ನು ವಾಹನದಿಂದ ಹೊರತೆಗೆದು, ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ.

ಆದರೆ, ಆಟೋದೊಳಗೆ ಸಿಲುಕಿಕೊಂಡಿದ್ದ ಕುದುರೆಯು ಸುಮಾರು 20 ನಿಮಿಷಗಳ ಕಾಲ ಹೊರಬರಲಾಗದೆ ಒದ್ದಾಡಿದೆ. ನಂತರ, ಸ್ಥಳೀಯರು ಹರಸಾಹಸಪಟ್ಟು ಅದನ್ನು ಹೊರತೆಗೆದಿದ್ದಾರೆ. ಈ ಘಟನೆಯಲ್ಲಿ ಕುದುರೆಗೂ ಸಹ ಗಾಯಗಳಾಗಿವೆ.
“ಕಳೆದ ಎರಡು-ಮೂರು ದಿನಗಳಿಂದ ಈ ಕುದುರೆಗಳು ಇದೇ ಸ್ಥಳದಲ್ಲಿ ಕಾದಾಡುತ್ತಿರುವುದನ್ನು ನಾವು ನೋಡಿದ್ದೇವೆ ಮತ್ತು ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆವು. ಆದರೆ, ಯಾವುದೇ ಕ್ರಮ ಕೈಗೊಂಡಿರಲಿಲ್ಲ,” ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕುದುರೆಗಳ ಮಾಲೀಕರನ್ನು ಪತ್ತೆಹಚ್ಚಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ನಗರದಲ್ಲಿ ಅಲೆಯುತ್ತಿರುವ ಬಿಡಾಡಿ ಕುದುರೆಗಳನ್ನು ರಕ್ಷಿಸುವ ಮೂಲಕ ಭವಿಷ್ಯದಲ್ಲಿ ಇಂತಹ ಅನಾಹುತಗಳನ್ನು ತಡೆಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.


















