ರಾಜ್ಯದಲ್ಲಿ ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಸಾಕಷ್ಟು ಆತಂಕ ಮೂಡಿಸುತ್ತಿವೆ. ಹಾಸನ ಜಿಲ್ಲೆಯಲ್ಲಂತೂ ಹೃದಯಾಘಾತದ ಸರಣಿ ಸಾವು ಜನರನ್ನು ಬೆಚ್ಚಿ ಬೀಳಿಸಿದೆ. ಈ ಮಧ್ಯೆ ಮತ್ತೊಂದು ಶಾಕಿಂಗ್ ಸುದ್ದಿ ಹೊರ ಬಿದ್ದಿದೆ. ಆರೋಗ್ಯ ಇಲಾಖೆಯ ಸ್ಟೆಮಿ ಯೋಜನೆಯಲ್ಲಿ ಈ ವಿಷಯ ಬಯಲಾಗಿದೆ. ಎದೆ ನೋವು ಎಂದು ತಾಲ್ಲೂಕು ಆಸ್ಪತ್ರೆಗೆ ಬಂದಿದ್ದ ಜನರನ್ನು ಪರೀಕ್ಷೆಗೆ ಒಳಪಡಿಸಿದಾಗ ಹೆಚ್ಚು ಜನರಿಗೆ ಹೃದಯಾಘಾತ ಆಗಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲೇ ಹೃದಯಘಾತದಿಂದಾಗುವ ಸಾವಿನ ಪ್ರಮಾಣ ಕಡಿಮೆ ಮಾಡುವುದಕ್ಕಾಗಿ ಆರೋಗ್ಯ ಇಲಾಖೆಯು ಜಯದೇವ ಆಸ್ಪತ್ರೆ ಆಶ್ರಯದಲ್ಲಿ ರಾಜ್ಯದ 75 ತಾಲ್ಲೂಕು ಆಸ್ಪತ್ರೆಗಳಲ್ಲಿ ಸ್ಟೆಮಿ ಯೋಜನೆ ಜಾರಿಗೆ ತಂದಿದೆ.
ಹೃದಯಾಘಾತವಾದಾಗ ತ್ವರಿತ ಚಿಕಿತ್ಸೆ ನೀಡಲು ಈ ಸ್ಟೆಮಿ ಯೋಜನೆ ಸಹಕಾರಿಯಾಗುತ್ತಿದೆ. ರೋಗಿಗಳು ಎದೆನೋವು ಅಂತಾ ಬಂದರೆ ಅವರಿಗೆ ಇಸಿಜಿ ಮಾಡಿ ಅದರ ಮಾಹಿತಿಯನ್ನು ಜಯದೇವ ಆಸ್ಫತ್ರೆ ವೈದ್ಯರಿಗೆ ಕಳಿಹಿಸಲಾಗುತ್ತದೆ. ಬಳಿಕ ಟೆಸ್ಟ್ ಮಾಡಿ ಹೃದಯದಲ್ಲಿ ಸಮಸ್ಯೆ ಏನಿದೆ ಎನ್ನುವುದನ್ನು ತಿಳಿದು, ಚಿಕಿತ್ಸೆ ನೀಡಲಾಗುತ್ತದೆ. ಇದರಿಂದಾಗಿ ಹೃದಯಾಘಾತ ಪ್ರಕರಣಗಳನ್ನು ತಡೆಯಬಹುದು ಎಂದು ವೈದ್ಯರು ಹೇಳಿದ್ದಾರೆ.