ಬೆಂಗಳೂರು : ಚಿತ್ರರಂಗದಲ್ಲಿ ಸುಮಾರು 13 ವರ್ಷಗಳ ಅನುಭವ ಹೊಂದಿರುವ ಅಲ್ವಿನ್ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ‘ಓಂ ಶಿವಂ’ ಚಿತ್ರದ ಹಾಡುಗಳು ಇತ್ತೀಚೆಗೆ ಕ್ರಿಶ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಆಗಿವೆ.
ವಿಜಯ್ ಯಾರ್ಡ್ಲಿ ಸಂಗೀತ ಸಂಯೋಜಿಸಿರುವ ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಶಿವನ ಕುರಿತಾದ ಒಂದು ಗೀತೆಯನ್ನು ಸಂಸ್ಕೃತದಲ್ಲಿ ರಚಿಸಿರುವುದು ವಿಶೇಷ. ಉಳಿದ ಮೂರು ಗೀತೆಗಳಿಗೆ ಚಿತ್ರ ಸಾಹಿತಿಗಳಾದ ಕವಿರಾಜ್, ಡಾ. ವಿ. ನಾಗೇಂದ್ರ ಪ್ರಸಾದ್ ಹಾಗೂ ಗೌಸ್ ಪೀರ್ ಸಾಹಿತ್ಯ ಬರೆದಿದ್ದಾರೆ.
ಚಿತ್ರವನ್ನು ದೀಪಾ ಮೂವೀಸ್ ಬ್ಯಾನರ್‌ನಲ್ಲಿ ಕೆ.ಎನ್. ಕೃಷ್ಣ ನಿರ್ಮಾಣ ಮಾಡಿದ್ದಾರೆ. ಭಾರ್ಗವ್ ಕೃಷ್ಣ ಚಿತ್ರದ ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಮೂಲತಃ ರಂಗಭೂಮಿ ಕಲಾವಿದರಾದ ಅಲ್ವಿನ್ ಸುಮಾರು 600ಕ್ಕೂ ಹೆಚ್ಚು ಬಿದಿ ನಾಟಕಗಳನ್ನು ಮಾಡಿದ್ದಾರೆ. ಇದೀಗ ‘ಓಂ ಶಿವಂ’ ಸಿನಿಮಾ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಅಲ್ವಿನ್, ‘ಚಿತ್ರದಲ್ಲಿ ನಾಲ್ಕು ಸಾಂಗ್‌ಗಳು ಇವೆ. ಸೆಪ್ಟೆಂಬರ್ 5 ರಂದು ನಮ್ಮ ಚಿತ್ರ ವಿಜಯ್ ಸಿನಿಮಾಸ್ ಮೂಲಕ ರಿಲೀಸ್ ಆಗಲಿದೆ. ಇದೊಂದು ಲವ್ ಮತ್ತು ಆ್ಯಕ್ಷನ್ ಚಿತ್ರ. ಎರಡು ಜಾನರ್‌ನಲ್ಲಿ ಸಿನಿಮಾ ಸಾಗುತ್ತದೆ. ಇಂದಿನ ಹುಡುಗ-ಹುಡುಗಿ ಲವ್ ಉಳಿಸಿಕೊಳ್ಳಲು ಹೇಗೆಲ್ಲಾ ಹೋರಾಡುತ್ತಾರೆ ಎಂಬುದು ಚಿತ್ರದ ಒನ್ ಲೈನ್ ಸ್ಟೋರಿಯಾಗಿದೆ.
ಬೆಂಗಳೂರು, ಮಂಗಳೂರು, ಮಂಡ್ಯ, ಮಡಿಕೇರಿ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ. ಈ ಚಿತ್ರವನ್ನು ನಾವು ಮೊದಲು ಕನ್ನಡದಲ್ಲಿ ರಿಲೀಸ್ ಮಾಡಿ, ನಂತರ ತಮಿಳು, ತೆಲಗು ಭಾಷೆಗಳಿಗೂ ತಲುಪಿಸುವ ಯೋಜನೆ ಚಿತ್ರತಂಡಕ್ಕಿದೆ’ ಎಂದು ಹೇಳಿದ್ದಾರೆ.
ಚಿತ್ರದ ನಿರ್ಮಾಪಕ ಕೃಷ್ಣ ಕೆ.ಎನ್ ಮಾತನಾಡಿ, ಕನಸು ಇಟ್ಟುಕೊಂಡು ಸಿನಿಮಾ ಮಾಡಿದ್ದೇನೆ. 20 ವರ್ಷದ ಹಿಂದೆ ಸಿನಿಮಾ ಮಾಡುವ ಆಸೆ ಇತ್ತು. ಆಗಲಿಲ್ಲ. ಈಗ ಮಗನ ಮೂಲಕ ನನ್ನ ಕನಸು ಇಡೇರಿಸಿಕೊಂಡಿದ್ದೇನೆ. ಜೊತೆಗೆ ನಾನು ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದೇನೆ’ ಎಂದಿದ್ದಾರೆ.

ಚಿತ್ರದ ನಾಯಕ ಭಾರ್ಗವ್ ಕೃಷ್ಣ ಮಾತನಾಡಿ, ‘ಇದು ನನ್ನ ಮೊದಲ ಸಿನಿಮಾ. ನಿರ್ದೇಶಕರು ಕಥೆ ಹೇಳಿದಾಗ ತುಂಬಾ ಖುಷಿ ಪಟ್ಟೆ. ಇದರಲ್ಲಿ ಒಳ್ಳೆಯ ಸಾಂಗ್, ಫೈಟ್, ಲವ್ ಕಥೆ ಇದೆ. ನಾನು ನಿರ್ದೇಶಕರ ಜೊತೆಗೆ 5-6 ತಿಂಗಳು ತರಬೇತಿ ಪಡೆದು ನಟಿಸಿದ್ದೇನೆ. ನಾನಿಲ್ಲಿ ಶಿವು ಪಾತ್ರ ಮಾಡಿದ್ದು, ಲವ್ವಲ್ಲಿ ಬಿದ್ದಾಗ ಏನೆಲ್ಲಾ ಆಗುತ್ತದೆ ಎಂಬುದನ್ನು ನನ್ನಿಂದ ತೋರಿಸಲಾಗಿದೆ’ ಎಂದಿದ್ದಾರೆ.
ಚಿತ್ರದ ನಾಯಕಿ ವಿರಾಣಿಕಾ ಶೆಟ್ಟಿ ಮಾತನಾಡಿ, ‘ನಾನು ಈ ಚಿತ್ರಕ್ಕೆ ಆಡಿಶನ್ ಮೂಲಕ ಆಯ್ಕೆ ಆದೆ. ಇಂದಿನ ಜನರೇಷನ್‌ನ ಲವ್ ಇದರಲ್ಲಿ ಇದೆ’ ಎಂದಷ್ಟೇ ಹೇಳಿದ್ದಾರೆ.

ಇನ್ನು ಚಿತ್ರದ ಸಂಗೀತ ನಿರ್ದೇಶಕ ವಿಜಯ್ ಮಾತನಾಡಿ, ‘ಇದು ನನ್ನ ಕನ್ನಡದ ನಾಲ್ಕನೇ ಸಿನಿಮಾ. ತಮಿಳನಲ್ಲಿ ಹಲವು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಇದೀಗ ವಿಭಿನ್ನ ಜಾನರ್‌ನ ನಾಲ್ಕು ಸಾಂಗ್ ಬಿಡುಗಡೆ ಆಗಿವೆ. ಪ್ರಾರಂಭದಲ್ಲಿ ಶಿವಂ ಸಾಂಗ್ ಇರಲಿಲ್ಲ ನಿರ್ಮಾಪಕರು ಹೇಳಿದ್ದರಿಂದ ಅದನ್ನು ಮಾಡಿದ್ವಿ. ಈ ಹಾಡಿಗೆ ಸಂಸ್ಕೃತದಲ್ಲಿ ಸಾಹಿತ್ಯವಿದೆ’ ಎಂದು ಚಿತ್ರದ ಸಾಹಿತಿಗಳು ಮತ್ತು ಹಾಡುಗಾರ ಬಗ್ಗೆ ಮಾಹಿತಿ ನೀಡಿದ್ದಾರೆ.
ವೇದಿಕೆಯಲ್ಲಿ ಸಾಹಿತಿ ಕವಿರಾಜ್, ‘ಈ ಹಾಡು ಬರೆಯಲು ಖುಷಿಯಾಗಿದೆ. ಒಳ್ಳೆಯ ಸಾಲುಗಳು ಇದರಲ್ಲಿ ಇವೆ. ಗಾಯಕರು ಹಾಡಿದ್ದಾರೆ. ಮೊದಲಿನಂತೆ 100 ದಿನ ಸಿನಿಮಾ ಓಡುತ್ತಿಲ್ಲ. ಮೂರು ದಿನ ಓಡಿದ್ರೆ ಹೆಚ್ಚು. ಹಾಗಾಗಿ ಸಿನಿಮಾ ನೋಡಬೇಕು ಅನ್ನಿಸಿದರೇ, ಪ್ರೇಕ್ಷಕರು ಮೊದಲ ಮೂರು ದಿನ ಬಂದು ನೋಡಿ. ಮೂರು ದಿನ ಚೆನ್ನಾಗಿ ಹೋದರೆ, ನಾಲ್ಕನೇ ದಿನ ಸಿನಿಮಾ ಥಿಯೇಟರ್‌ನಲ್ಲಿ ಇರುತ್ತದೆ. ಆ ಮೂಲಕ ಸಿನಿಮಾ ಗೆಲ್ಲಿಸಬೇಕು’ ಎಂದಿದ್ದಾರೆ.

ಉಳಿದಂತೆ ಛಾಯಾಗ್ರಾಹಕ ವಿರೇಶ್ ಎನ್.ಟಿ.ಎ, ಕಲಾವಿದರಾದ ವರ್ಧನ ತೀರ್ಥಹಳ್ಳಿ, ಉಗ್ರಂ ರವಿ ತಮ್ಮ ಅನುಭವ ಹಂಚಿಕೊಂಡರು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ನಟರಾದ ಅಭಯ್, ಗೌರಿ ಶಂಕರ್ ಮುಂತಾದವರು ಉಪಸ್ಥಿತರಿದ್ದರು.