ಪಾಟ್ನಾ: ಬಿಹಾರದಲ್ಲಿ ಚುನಾವಣಾ ಕಾವು ಏರುತ್ತಿದ್ದು, ಇದೀಗ ‘ಮಟನ್ ರಾಜಕೀಯ’ ಹೊಸದೊಂದು ವಿವಾದದ ಕಿಡಿ ಹೊತ್ತಿಸಿದೆ. ಪವಿತ್ರ ಶ್ರಾವಣ ಮಾಸದ ಸೋಮವಾರದಂದು ನಡೆದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಸಭೆಯಲ್ಲಿ ಮಟನ್ ಬಡಿಸಲಾಗಿದೆ ಎಂದು ಆರೋಪಿಸಿರುವ ವಿರೋಧ ಪಕ್ಷದ ನಾಯಕ, ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್, ಆಹಾರ ಪದ್ಧತಿಯ ವಿಚಾರದಲ್ಲಿ ಬಿಜೆಪಿ ಅನುಸರಿಸುತ್ತಿರುವ “ಆಯ್ದ ರಾಜಕೀಯ” ಮತ್ತು ಬೂಟಾಟಿಕೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಪಾಟ್ನಾದಲ್ಲಿ ನಡೆದ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯ ಭೋಜನ ಸ್ಥಳದ ವಿಡಿಯೋವೊಂದನ್ನು ಹಂಚಿಕೊಂಡಿರುವ ತೇಜಸ್ವಿ, ಅಲ್ಲಿ ‘ಮಟನ್ ರೋಗನ್‌ಜೋಶ್’ ಎಂದು ಲೇಬಲ್ ಹಚ್ಚಲಾಗಿದ್ದ ಪಾತ್ರೆಯನ್ನು ಪ್ರದರ್ಶಿಸಿದ್ದಾರೆ. ಹಿಂದೂಗಳು ಪವಿತ್ರವೆಂದು ಭಾವಿಸುವ ಹಾಗೂ ಮಾಂಸಾಹಾರವನ್ನು ತ್ಯಜಿಸುವ ಶ್ರಾವಣ ಮಾಸದ ಎರಡನೇ ಸೋಮವಾರದಂದೇ ಈ ಕಾಶ್ಮೀರಿ ಖಾದ್ಯವನ್ನು ಬಡಿಸಿರುವುದರ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಪವಿತ್ರ ಮಾಸಗಳಲ್ಲಿ ಮಾಂಸಾಹಾರ ಸೇವಿಸಿದ್ದಕ್ಕೆ ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ತೇಜಸ್ವಿ ಯಾದವ್, ಇದೀಗ ಅದೇ ಅಸ್ತ್ರವನ್ನು ಬಿಜೆಪಿ ವಿರುದ್ಧ ಬಳಸಿದ್ದಾರೆ. ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, “ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದದೊಂದಿಗೆ, ಬಿಜೆಪಿಯ ಸಚಿವರು ಮತ್ತು ಶಾಸಕರು ಶ್ರಾವಣ ಸೋಮವಾರದಂದು ಮಟನ್ ಔತಣವನ್ನು ಸವಿಯುತ್ತಿದ್ದಾರೆ. ಬಿಹಾರ ಸಂಪುಟದಲ್ಲಿ ದಿನಕ್ಕೆ ಒಂದು ಕೆಜಿ ಮಟನ್ ತಿನ್ನುವ ಮೂವರು ಸಚಿವರಿದ್ದಾರೆ, ಆದರೆ ಅವರೇ ಸನಾತನ ಧರ್ಮದ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡುತ್ತಾರೆ,” ಎಂದು ವ್ಯಂಗ್ಯವಾಡಿದ್ದಾರೆ.

“ಯಾರ ಆಹಾರ ಪದ್ಧತಿಯ ಬಗ್ಗೆಯೂ ನಮಗೆ ಯಾವುದೇ ತೊಂದರೆಯಿಲ್ಲ. ಆದರೆ ಪ್ರಧಾನಿಯವರ ನಿಲುವು ಅತ್ಯಂತ ಆಯ್ದ ಸ್ವರೂಪದ್ದಾಗಿದೆ. ತಮ್ಮ ಪಕ್ಷದ ನಾಯಕರು ಮಟನ್ ತಿಂದರೆ ಅವರಿಗೆ ಯಾವ ತೊಂದರೆಯೂ ಇಲ್ಲ. ಆದರೆ ಶ್ರಾವಣದಲ್ಲಿ ಮಾಂಸ ತಿನ್ನದ ವಿರೋಧ ಪಕ್ಷದ ನಾಯಕರ ಆಹಾರ ಪದ್ಧತಿಯನ್ನು ಸುಳ್ಳುಗಳ ಮೂಲಕ ರಾಷ್ಟ್ರೀಯ ವಿವಾದವನ್ನಾಗಿ ಮಾಡಲು ಅವರು ಎಂದಿಗೂ ಹಿಂಜರಿಯುವುದಿಲ್ಲ,” ಎಂದು ತೇಜಸ್ವಿ ನೇರವಾಗಿ ಪ್ರಧಾನಿಯವರನ್ನು ಗುರಿಯಾಗಿಸಿ ಟಾಂಗ್ ಕೊಟ್ಟಿದ್ದಾರೆ.
ಬಿಜೆಪಿಯಿಂದ ತಿರುಗೇಟು
ತೇಜಸ್ವಿ ಯಾದವ್ ಅವರ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಮನೋಜ್ ಶರ್ಮಾ, “ಯಾರು ಏನು ತಿಂದರು ಎಂಬುದಕ್ಕೆ ತೇಜಸ್ವಿ ಅವರ ಬಳಿ ಸಿಸಿಟಿವಿ ದೃಶ್ಯಾವಳಿ ಇದೆಯೇ? ಅವರು ಆಹಾರದ ಕೌಂಟರ್ ನೋಡಬೇಕೋ ಅಥವಾ ಬಿಹಾರದ ಅಭಿವೃದ್ಧಿಗಾಗಿ ಕೆಲಸ ಮಾಡಬೇಕೋ? ಬಹುಶಃ ಅಡುಗೆಯವರು ಸಸ್ಯಾಹಾರಿ ಮತ್ತು ಮಾಂಸಹಾರಿ ಎರಡೂ ಆಯ್ಕೆಗಳನ್ನು ನೀಡಿರಬಹುದು. ಇದರಲ್ಲಿ ಇಷ್ಟೊಂದು ಗಲಾಟೆ ಮಾಡುವಂತಹದ್ದೇನಿದೆ?” ಎಂದು ಪ್ರಶ್ನಿಸಿದ್ದಾರೆ.
ಆಹಾರ ರಾಜಕೀಯದ ಹಿನ್ನೆಲೆ
ಬಿಹಾರದ ರಾಜಕೀಯದಲ್ಲಿ ಆಹಾರವನ್ನು, ಅದರಲ್ಲೂ ವಿಶೇಷವಾಗಿ ಮಾಂಸಾಹಾರವನ್ನು, ರಾಜಕೀಯ ಅಸ್ತ್ರವಾಗಿ ಬಳಸುತ್ತಿವುದು ಹೊಸತೇನಲ್ಲ. ಈ ಹಿಂದೆಯೂ ಇಂತಹ ಸಾಕಷ್ಟು ವಿವಾದಗಳು ರಾಜ್ಯ ರಾಜಕೀಯದಲ್ಲಿ ಕಂಡುಬಂದಿವೆ. ಅವೆಂದರೆ,
- ಕಳೆದ ವಾರವಷ್ಟೇ ಕೇಂದ್ರ ಸಚಿವ ಮತ್ತು ಜೆಡಿಯು ನಾಯಕ ಲಲನ್ ಸಿಂಗ್ (ರಾಜೀವ್ ರಂಜನ್ ಸಿಂಗ್) ಆಯೋಜಿಸಿದ್ದ ಮಟನ್ ಪಾರ್ಟಿಯ ಬಗ್ಗೆ ತೇಜಸ್ವಿ ಯಾದವ್ ಪ್ರಸ್ತಾಪಿಸಿ, ಪ್ರಧಾನಿ ಮೋದಿಯವರನ್ನು ಲೇವಡಿ ಮಾಡಿದ್ದರು.
- 2023ರಲ್ಲಿ, ಶ್ರಾವಣ ಮಾಸದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮಟನ್ ಊಟ ಏರ್ಪಡಿಸಿದ್ದು ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಆಗ ಪ್ರಧಾನಿ ಮೋದಿ, ಇದನ್ನು “ಮೊಘಲ್ ಕಾಲದ ಮನಸ್ಥಿತಿ” ಎಂದು ಕರೆದಿದ್ದಲ್ಲದೆ, “ವಿರೋಧ ಪಕ್ಷಗಳು ದೇವಾಲಯಗಳನ್ನು ಕೆಡವಿ ಆನಂದಿಸುತ್ತಿದ್ದ ಮೊಘಲರಂತೆ, ಶ್ರಾವಣದಲ್ಲಿ ಮಟನ್ ತಿನ್ನುವ ವಿಡಿಯೋ ಹಾಕಿ ಜನರ ಭಾವನೆಗಳಿಗೆ ನೋವುಂಟು ಮಾಡುತ್ತಿವೆ,” ಎಂದು ಆರೋಪಿಸಿದ್ದರು.
- 2024ರ ಲೋಕಸಭಾ ಚುನಾವಣೆಯ ಮುನ್ನ ತೇಜಸ್ವಿ ಯಾದವ್ ನವರಾತ್ರಿಯ ಸಮಯದಲ್ಲಿ ಮೀನು ಸೇವಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಅದಕ್ಕೆ ಉತ್ತರಿಸಿದ್ದ ತೇಜಸ್ವಿ, ಆ ವಿಡಿಯೋವನ್ನು ನವರಾತ್ರಿ ಪ್ರಾರಂಭವಾಗುವ ಒಂದು ದಿನದ ಮೊದಲು ಚಿತ್ರೀಕರಿಸಲಾಗಿದೆ ಎಂದು ಸ್ಪಷ್ಟೀಕರಣ ನೀಡಿದ್ದರು.
- ಒಟ್ಟಿನಲ್ಲಿ, ಬಿಹಾರದ ಚುನಾವಣಾ ರಾಜಕೀಯವು ಅಭಿವೃದ್ಧಿಯ ವಿಷಯಗಳಿಗಿಂತ ಹೆಚ್ಚಾಗಿ, ಧರ್ಮ ಮತ್ತು ಆಹಾರ ಪದ್ಧತಿಯಂತಹ ಸೂಕ್ಷ್ಮ ವಿಷಯಗಳ ಸುತ್ತ ಗಿರಕಿ ಹೊಡೆಯುತ್ತಿರುವುದು ಈ ‘ಮಟನ್ ಪಾಲಿಟಿಕ್ಸ್’ ನಿಂದ ಮತ್ತೊಮ್ಮೆ ಸಾಬೀತಾದಂತಾಗಿದೆ.