ಬೆಂಗಳೂರು : ದೇಶದ ಯಾವುದೇ ರಾಜ್ಯದಲ್ಲೂ ತೆರಿಗೆ ನೋಟಿಸ್ ನೀಡಿಲ್ಲ, ಆದರೆ, ಕರ್ನಾಟಕದಲ್ಲಿ ಮಾತ್ರ ಸಣ್ಣ ವ್ಯಾಪಾರಿಗಳಿಗೆ ನೋಟೀಸ್ ನೀಡಲಾಗಿದೆ. ಇದರರ್ಥ ಇದು ಕೇಂದ್ರ ಸರ್ಕಾರದ ಕೆಲಸವಲ್ಲ, ರಾಜ್ಯ ಸರ್ಕಾರವೇ ಸಣ್ಣ ವ್ಯಾಪಾರಸ್ಥರಿಗೆ ತೆರಿಗೆ ನೋಟೀಸ್ ನೀಡಿರುವುದು ಸ್ಪಷ್ಟವಾಗಿದೆ ಎಂದು ರಾಜ್ಯ ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಮತ್ತು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ. ರವಿ ಅವರು ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ತೆರಿಗೆ ನೋಟೀಸ್ ಜಾರಿ ಮಾಡುವ ಮೂಲಕ ರಾಜ್ಯ ಸರ್ಕಾರ ಸಣ್ಣ ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳು ಯುಪಿಐ ಬದಲಿಗೆ “ಕೇವಲ ನಗದು ನೀತಿ” ಅಳವಡಿಸಿಕೊಳ್ಳುವಂತೆ ಮಾಡಿದ್ದಾರೆ. ಈ ಮೂಲಕ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಹಿನ್ನಡೆಯಾಗುವಂತೆ ಮಾಡಿದ್ದಾರೆಂದು ಕಿಡಿಕಾರಿದರು.
ಯಾವುದೇ ಪರಿಶೀಲನೆ ಇಲ್ಲದೆ PhonePe/PayTM ನಂತಹ ಮೂರನೇ ವ್ಯಕ್ತಿಯ ಮಾಹಿತಿಯ ಆಧಾರದ ಮೇಲೆ ನೋಟೀಸ್‌ಗಳನ್ನು ಜಾರಿ ಮಾಡುತ್ತಿದ್ದಾರೆ. ಇದರಿಂದ ಸಣ್ಣ ವ್ಯಾಪಾರಿಗಳು, ಬೀದಿ ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ಭಯಭೀತರಾಗಿದ್ದಾರೆ.
ಹಣ್ಣುಗಳು, ಹೂವುಗಳು, ಮಾಂಸ ಇತ್ಯಾದಿಗಳಂತಹ ವಿನಾಯಿತಿ ಪಡೆದ ಸರಕುಗಳ ವ್ಯಾಪಾರ ಮಾಡುವ ಮಾರಾಟಗಾರರಿಗೆ ನೋಟೀಸ್ ನೀಡಲಾಗಿದೆ, ಇದು ಅಧಿಕಾರಿಗಳ ಮನಸ್ಸಿನ ಕೊರತೆಯನ್ನು ಸೂಚಿಸುತ್ತದೆ ಎಂದು ಕಿಡಿಕಾರಿದ್ಧಾರೆ.
ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟೀಸ್ ಜಾರಿಯಾದ ನಂತರ, ಅನೇಕ ಸಣ್ಣ ವ್ಯಾಪಾರಿಗಳು ಯುಪಿಐ ಮೂಲಕ ಹಣವನ್ನು ಸ್ವೀಕರಿಸುವುದನ್ನು ನಿಲ್ಲಿಸಿದ್ದಾರೆ. ನಗದು ಮಾತ್ರ ಸ್ವೀಕರಿಸುತ್ತಿದ್ದಾರೆ. ಈ ಬಗ್ಗೆ ಫಲಕಗಳನ್ನೂ ಹಾಕಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ತೆರಿಗೆ ಸಂಗ್ರಹವನ್ನು ಹೆಚ್ಚು ಮಾಡುವಂತೆ ನಿರ್ದೇಶನ ನೀಡಿದ್ದರು.
ಮುಖ್ಯಮಂತ್ರಿಗಳ ನಿರ್ದೇಶನದಂತೆ ಅಧಿಕಾರಿಗಳು ವ್ಯಾಪಾರಿಗಳಿಗೆ ನೋಟೀಸ್ ನೀಡಿದ್ದಾರೆ. ರಾಜ್ಯ ಸರ್ಕಾರ ತಕ್ಷಣವೇ ನೋಟೀಸ್‌ಗಳನ್ನು ಹಿಂಪಡೆಯಬೇಕು ಮತ್ತು ಭಯದ ವಾತಾವರಣವನ್ನು ಸೃಷ್ಟಿಸಬಾರದು ಎಂದು ಒತ್ತಾಯಿಸಿದ್ದಾರೆ.
ರಾಜ್ಯ ವಾಣಿಜ್ಯ ತೆರಿಗೆಗಳ ಇಲಾಖೆಯಡಿಯಲ್ಲಿ ಬರುವ ಸರಕು ಸೇವಾ ತೆರಿಗೆ ವಿಭಾಗ ಸಹ ಕರ್ನಾಟಕ ಸರ್ಕಾರದ ಅಧೀನದಲ್ಲಿ ಬರುತ್ತದೆ. ಕಾಂಗ್ರೆಸ್ಸಿಗರೇ, ಸುಳ್ಳನ್ನು ಪದೇ ಪದೇ ಹೇಳಿದರೆ ಅದು ಸತ್ಯವಾಗದು. ರಾಜ್ಯ ಬೊಕ್ಕಸವನ್ನು ದಿವಾಳಿ ಮಾಡಿರುವ ಲಾಟರಿ ಸಿಎಂ ಈಗ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ಮೂಲಕ ಬಡವರ ರಕ್ತ ಹೀರಲು ಹೊರಟಿದೆ. ರಾಜ್ಯ ಸರ್ಕಾರ ತನ್ನ ಖಜಾನೆ ಖಾಲಿಯಾಗಿದೆ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದರು. ಇದೇ ವೇಳೆ ಸಣ್ಣ ವ್ಯಾಪಾರಿಗಳು ಕರೆ ನೀಡಿದ ಪ್ರತಿಭಟನೆಗೆ ಬಿಜೆಪಿ ಬೆಂಬಲವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.


















