ಕುಂದಾಪುರ/ಉಡುಪಿ : ‘ಕ್ರೀಡಾಕೂಟಗಳು ಭಾವನೆಗಳನ್ನು ಬೆಸೆದು ಎಲ್ಲರನ್ನು ಒಗ್ಗೂಡಿಸುತ್ತದೆ. ನಾಡಗೀತೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರು ಜಾತಿ-ಮತಗಳನ್ನು ಮೀರಿದ ಭಾವೈಕ್ಯತೆಯ, ಸರ್ವ ಜನಾಂಗದ ಶಾಂತಿಯ ತೋಟ ಕರ್ನಾಟಕ ಎಂದು ರಾಜ್ಯ ಹಿಂದುಳಿದ ಆಯೋಗಳ ಮಾಜಿ ಅಧ್ಯಕ್ಷ ಮತ್ತು ಕುಂದಗನ್ನಡ ಅಧ್ಯಯನ ಪೀಠದ ಸದಸ್ಯ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ವಿಶ್ವ ಕುಂದಾಪ್ರ ಕನ್ನಡ ದಿನದ ಪ್ರಯುಕ್ತ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ವತಿಯಿಂದ ನಡೆದ 2ನೇ ವರ್ಷದ ‘ಲಗೋರಿ’ ಗ್ರಾಮೀಣ ಕ್ರೀಡಾಕೂಟದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಇಂತಹ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ಹಾಗೂ ನಮ್ಮ ಅಬ್ಬಿ ಭಾಷೆಗಳನ್ನು ಮಾತನಾಡುವುದರಿಂದ ಮಕ್ಕಳಲ್ಲಿ ಒಳ್ಳೆಯ ಭಾವನೆ ಬೆಳೆದು ಭಾಷೆಗಳು ಅಭಿವೃದ್ಧಿಯಾಗುತ್ತದೆ. ಕಲಾಕ್ಷೇತ್ರದವರು ʼಇನಿದನಿʼ, ʼಲಗೋರಿʼ ಕ್ರೀಡಾಕೂಟದಂತಹ ಒಳ್ಳೆಯ ಕಾರ್ಯಕ್ರಮ ಆಯೋಜಿಸುವುದರೊಂದಿಗೆ ಜನಮಾನಸದಲ್ಲಿ ಉಳಿದಿದ್ದಾರೆ’ ಎಂದು ಹೇಳಿದರು.