ಮುಂಬೈ: ದೇಶವನ್ನೇ ಬೆಚ್ಚಿಬೀಳಿಸಿದ್ದ 2006ರ ಮುಂಬೈ ಸರಣಿ ರೈಲು ಸ್ಫೋಟ ಪ್ರಕರಣದಲ್ಲಿ, 19 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ, ಬಾಂಬೆ ಹೈಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದ್ದು, ವಿಶೇಷ ನ್ಯಾಯಾಲಯದಿಂದ ದೋಷಿಗಳೆಂದು ಘೋಷಿಸಲ್ಪಟ್ಟಿದ್ದ ಎಲ್ಲಾ 12 ಆರೋಪಿಗಳನ್ನೂ ಖುಲಾಸೆಗೊಳಿಸಿದೆ. “ಆರೋಪಿಗಳ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಸಂಪೂರ್ಣವಾಗಿ ವಿಫಲವಾಗಿದೆ” ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಕಟುವಾಗಿ ಹೇಳಿದೆ.

ಈ ತೀರ್ಪಿನಿಂದಾಗಿ, 2015ರಲ್ಲಿ ವಿಚಾರಣಾ ನ್ಯಾಯಾಲಯವು ಐವರಿಗೆ ವಿಧಿಸಿದ್ದ ಮರಣದಂಡನೆ ಮತ್ತು ಏಳು ಮಂದಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆ ರದ್ದಾದಂತಾಗಿದೆ. ಅಲ್ಲದೇ ಬೇರೆ ಯಾವುದೇ ಪ್ರಕರಣದಲ್ಲಿ ಭಾಗಿಯಾಗಿಲ್ಲದಿದ್ದರೆ, ಈಗ ಈ ಎಲ್ಲಾ 12 ಮಂದಿ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ತೀರ್ಪಿನ ಪ್ರಮುಖಾಂಶಗಳು
ನ್ಯಾಯಮೂರ್ತಿಗಳಾದ ಅನಿಲ್ ಕಿಲೋರ್ ಮತ್ತು ಶ್ಯಾಮ್ ಚಂದಕ್ ಅವರನ್ನೊಳಗೊಂಡ ಪೀಠವು, “ಆರೋಪಿಗಳು ಈ ಅಪರಾಧ ಎಸಗಿದ್ದಾರೆಂದು ನಂಬಲು ಕಷ್ಟ. ಆದ್ದರಿಂದ, ಅವರ ಶಿಕ್ಷೆಯನ್ನು ರದ್ದುಗೊಳಿಸಲಾಗಿದೆ,” ಎಂದು ಹೇಳಿದೆ. ತನಿಖೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ ನ್ಯಾಯಾಲಯವು, “ಸ್ಫೋಟ ಸಂಭವಿಸಿ 100 ದಿನಗಳ ನಂತರ, ವ್ಯಕ್ತಿಯೊಬ್ಬರು ಶಂಕಿತನನ್ನು ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲ” ಎಂದು ಸಾಕ್ಷಿಗಳ ಹೇಳಿಕೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿತು. ಅಲ್ಲದೆ, ತನಿಖೆಯ ಸಮಯದಲ್ಲಿ ವಶಪಡಿಸಿಕೊಳ್ಳಲಾದ ಸ್ಫೋಟಕಗಳು, ಶಸ್ತ್ರಾಸ್ತ್ರಗಳು ಮತ್ತು ನಕ್ಷೆಗಳು ಈ ಸ್ಫೋಟಗಳಿಗೆ ಸಂಬಂಧಿಸಿದ್ದೆಂದು ಸಾಬೀತಾಗಿಲ್ಲ. ಸ್ಫೋಟದಲ್ಲಿ ಯಾವ ರೀತಿಯ ಬಾಂಬ್‌ಗಳನ್ನು ಬಳಸಲಾಗಿದೆ ಎಂಬುದನ್ನು ಸಾಬೀತುಪಡಿಸಲು ಕೂಡ ಪ್ರಾಸಿಕ್ಯೂಷನ್‌ಗೆ ಸಾಧ್ಯವಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.
189 ಜನರನ್ನು ಬಲಿಪಡೆದಿದ್ದ ಪ್ರಕರಣ
ಜುಲೈ 11, 2006ರಂದು ಸಂಜೆ ಜನದಟ್ಟಣೆ ಹೆಚ್ಚಿದ್ದಂಥ ಸಮಯದಲ್ಲಿ ಅಂದರೆ 6:24 ರಿಂದ 6:35ರ ನಡುವೆ, ಮುಂಬೈನ ಪಶ್ಚಿಮ ರೈಲ್ವೆ ಮಾರ್ಗದ ಸ್ಥಳೀಯ ರೈಲುಗಳ ಪ್ರಥಮ ದರ್ಜೆ ಬೋಗಿಗಳಲ್ಲಿ ಕೇವಲ 11 ನಿಮಿಷಗಳ ಅಂತರದಲ್ಲಿ ಏಳು ಸರಣಿ ಸ್ಫೋಟಗಳು ಸಂಭವಿಸಿದ್ದವು. ಪ್ರೆಶರ್ ಕುಕ್ಕರ್‌ಗಳನ್ನು ಬಳಸಿ ನಡೆಸಲಾಗಿದ್ದ ಈ ಭೀಕರ ದಾಳಿಯಲ್ಲಿ 189 ಅಮಾಯಕರು ಪ್ರಾಣ ಕಳೆದುಕೊಂಡು, 800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಚರ್ಚ್‌ಗೇಟ್‌ನಿಂದ ಹೊರಟಿದ್ದ ರೈಲುಗಳು ಮಾತುಂಗಾ ರೋಡ್, ಮಾಹಿಮ್ ಜಂಕ್ಷನ್, ಬಾಂದ್ರಾ, ಖಾರ್ ರೋಡ್, ಜೋಗೇಶ್ವರಿ, ಭಾಯಂದರ್ ಮತ್ತು ಬೊರಿವಲಿ ನಿಲ್ದಾಣಗಳ ಬಳಿ ಸ್ಫೋಟಗೊಂಡಿದ್ದವು.
2015ರಲ್ಲಿ, ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯ (MCOCA) ವಿಶೇಷ ನ್ಯಾಯಾಲಯವು ಫೈಸಲ್ ಶೇಖ್, ಆಸಿಫ್ ಖಾನ್, ಕಮಲ್ ಅನ್ಸಾರಿ, ಎಹ್ತೆಶಾಮ್ ಸಿದ್ದಿಖಿ ಮತ್ತು ನವೀದ್ ಖಾನ್ ಎಂಬ ಆರೋಪಿಗಳಿಗೆ ಮರಣದಂಡನೆ ಹಾಗೂ ಮೊಹಮ್ಮದ್ ಸಾಜಿದ್ ಅನ್ಸಾರಿ, ಮೊಹಮ್ಮದ್ ಅಲಿ, ಡಾ. ತನ್ವೀರ್ ಅನ್ಸಾರಿ, ಮಜೀದ್ ಶಫಿ, ಮುಜಮ್ಮಿಲ್ ಶೇಖ್, ಸೊಹೈಲ್ ಶೇಖ್ ಮತ್ತು ಜಮೀರ್ ಶೇಖ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ಹೈಕೋರ್ಟ್ ತೀರ್ಪಿನಿಂದಾಗಿ ಈ ಎಲ್ಲ ಆರೋಪಿಗಳೂ ಖುಲಾಸೆಗೊಂಡಿದ್ದಾರೆ.