ಬೆಂಗಳೂರು: ಸಿಎಂ ಸಿದ್ದರಾಮಯ್ಯ ನಡೆಸಿದ ಸಾಧನಾ ಸಮಾವೇಶ ಡಿಕೆಶಿ ಮುಗಿಸಲು ನಡೆಸಿದ ಸಮಾವೇಶ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah) ನಡೆಸಿದ ಸಮಾವೇಶ ಕಾಂಗ್ರೆಸ್‌ನ ಒಡಕನ್ನು ತೋರಿಸಿದೆ.ಅಲ್ಲಿದ್ದವರು ಡಿಕೆಶಿ ಪರ ಮಾತನಾಡಿಲ್ಲ. ಡಿಕೆಶಿಗೆ ಪಾಠ ಕಲಿಸಲು ಹಾಗೂ ಅಪಮಾನ ಮಾಡಲು ಈ ಸಮಾವೇಶ ನಡೆಸಲಾಗಿದೆ. ಡಿಕೆಶಿ ಈಗ ಎರಡನೇ ದರ್ಜೆಯ ನಾಯಕರಾಗಿಬಿಟ್ಟಿದ್ದಾರೆ. ಡಿಕೆಶಿ ಮುಗಿಸುವುದಕ್ಕೆ ಈ ಸಮಾವೇಶದ ಮೂಲಕ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ (Congress) ಪಕ್ಷದ ನಾಯಕರು ಬೀದಿಯಲ್ಲಿ ಬಡಿದಾಡಿಕೊಳ್ಳುತ್ತಿದ್ದಾರೆ. ಡಿಕೆಶಿ ಹಾಗೂ ಸಿದ್ದರಾಮಯ್ಯನವರ ಆಂತರಿಕ ಜಗಳವಿದು. ಬಿಜೆಪಿಗೆ ಸರ್ಕಾರವನ್ನು ಬೀಳಿಸುವ ಅಗತ್ಯವಿಲ್ಲ. ಈ ಸರ್ಕಾರ ಕಾಂಗ್ರೆಸ್‌ನ ಆಂತರಿಕ ಕಲಹದಿಂದಲೇ ಬಿದ್ದುಹೋಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮೈಸೂರಿನ ಸಮಾವೇಶದಲ್ಲಿ ಕೀಳಾಗಿ ಮಾತಾಡಿದ್ದಾರೆ. ಪ್ರಧಾನಿ ಬೊಗಳುತ್ತಾರೆಂದು ಹೇಳುವುದು ಕಾಂಗ್ರೆಸ್ ನಾಯಕರ ಮನಸ್ಥಿತಿಯನ್ನು ತೋರಿಸುತ್ತದೆ. ಬೆಂಗಳೂರಿನಲ್ಲಿ ಅಭಿವೃದ್ಧಿ ಮಾಡದೆ ಹೋಳು ಮಾಡಲಾಗಿದೆ. ಟ್ರಾಫಿಕ್ ಜಾಮ್, ಪ್ರವಾಹ, ಕಸದ ಸಮಸ್ಯೆ ಯಾವುದು ಕೂಡ ಈ ಕ್ರಮದಿಂದ ನಿವಾರಣೆಯಾಗುವುದಿಲ್ಲ. ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಒಡೆದರೆ ಪ್ರಗತಿಯಾಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.



















