ಕುಂದಾಪುರ : ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಅವರು ಎಲ್ಲ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸಿರುವ ನಾಯಕ. ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಸಟೆದು ನಿಲ್ಲುವ, ನಿಷ್ಠುರವಾದಿ ವ್ಯಕ್ತಿತ್ವದವರು. ಹೈನುಗಾರಿಕೆ, ಸಹಕಾರ, ಕೃಷಿ ಕ್ಷೇತ್ರದಲ್ಲಿ ಇವರ ಸಾಧನೆಗಳು ಮಾದರಿಯಾಗಿವೆ ಎಂದು ದ.ಕ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಹೇಳಿದ್ದಾರೆ.
ಅವಿಭಜಿತ ಕುಂದಾಪುರ ತಾಲೂಕಿನ ಕೃಷಿ ಪತ್ತಿನ ಸಹಕಾರಿ ಸಂಘಗಳ ವತಿಯಿಂದ 2024-25ನೇ ಸಾಲಿನ ಕರ್ನಾಟಕ ಸರ್ಕಾರ ಕೊಡಮಾಡುವ ‘ಸಹಕಾರ ರತ್ನ’ ಪ್ರಶಸ್ತಿ ಪುರಸ್ಕೃತ ಖಂಬದಕೋಣೆ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಅವರಿಗೆ ಜು.20ರಂದು ಕುಂದಾಪುರದ ಬಂಟರ ಯಾನೆ ನಾಡವರ ಸಂಘದ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದ.ಕ ಒಕ್ಕೂಟಕ್ಕೆ ಅತೀ ಹೆಚ್ಚು ಹಾಲು ಸರಬರಾಜು ಮಾಡುವ ಹೈನುಗಾರರಾಗಿ, 10 ಸಾವಿರ ಲೀಟರ್ ಸಾಮರ್ಥ್ಯದ ಸಾಂಧ್ರಶೀತಲೀಕರಣ ಘಟಕವನ್ನು ಸ್ಥಾಪಿಸಿ ಹೈನುಗಾರರನ್ನು ಉತ್ತೇಜಿಸಿದ್ದಾರೆ. ಸಹಕಾರ, ಹೈನೋದ್ಯಮ, ಕೃಷಿ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಗೆ ಇವರು ಕಾರಣರಾಗಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ.
ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕ ಎಂ.ಮಹೇಶ ಹೆಗ್ಡೆ ಮಾತನಾಡಿ, ರೈತರ ಸೇವಾ ಸಹಕಾರಿ ಸಂಘದ ಮಹತ್ವಕಾಂಕ್ಷೆಯ ಯೋಜನೆಯಾದ ಬಹುಕೋಟಿ ವೆಚ್ಚದ ಅ್ಯಗ್ರಿ ಮಾಲ್ ನಿರ್ಮಾಣ ಹಂತದಲ್ಲಿದೆ. ಸಹಕಾರ ಕ್ಷೇತ್ರದಲ್ಲಿ ಸರಿಯಾದ ನಾಯಕತ್ವ ಇದ್ದರೆ ಖಂಡಿತ ಯಶಸ್ಸು ಸಾಧ್ಯ, ಸಹಕಾರಿಗಳು ಸಶಕ್ತರಾಗಬೇಕು ಎಂದು ಹೇಳಿದರು.
ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆದೂರು ಸದಾನಂದ ಶೆಟ್ಟಿ, ವಂಡ್ಸೆ ವ್ಯವಸಾಯಿಕ ಸಹಕಾರಿ ಸಂಘದ ಅಧ್ಯಕ್ಷ ಎನ್.ಮಂಜಯ್ಯ ಶೆಟ್ಟಿ, ಅವಿಭಜಿತ ಕುಂದಾಪುರ ತಾಲೂಕಿನ ಕೃಷಿಪತ್ತಿನ ಸಹಕಾರಿ ಸಂಘಗಳ ನೌಕರರ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಐತಾಳ್, ಕಾರ್ಯದರ್ಶಿ ಕೀರ್ತಿಕುಮಾರ್ ಶೆಟ್ಟಿ, ಡಾ.ಗಣೇಶ ಗಂಗೊಳ್ಳಿ, ಸುಬ್ರಹ್ಮಣ್ಯ ಪಡುಕೋಣೆ ಸೇರಿದಂತೆ ಹಲವರು ಇದ್ದರು. ಎಸ್.ಪ್ರಕಾಶ್ಚಂದ್ರ ಶೆಟ್ಟಿ ಹಾಗೂ ಅವರ ಪತ್ನಿ ಗೀತಾ ಶೆಟ್ಟಿ ಅವರನ್ನು ಈ ವೇಳೆ ಸನ್ಮಾನಿಸಲಾಯಿತು.



















