ಧರ್ಮಸ್ಥಳದ ಸುತ್ತ ಹೆಣೆದುಕೊಂಡಿದ್ದ ಅಸಹಜ ಸಾವುಗಳ ಅನುಮಾನದ ಹುತ್ತವನ್ನು ಭೇದಿಸಲು ರಾಜ್ಯ ಸರ್ಕಾರ ಕೊನೆಗೂ ಎಸ್ ಐಟಿ ರಚಿಸಿದೆ.
ಜನಾಕ್ರೋಶ ಮತ್ತು ಒತ್ತಡಗಳಿಗೆ ಮಣಿದು, ಪ್ರಕರಣದ ಸಮಗ್ರ ತನಿಖೆಗಾಗಿ ನಾಲ್ವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ವಿಶೇಷ ತನಿಖಾ ತಂಡವನ್ನು (SIT) ಸರ್ಕಾರವು ರಚಿಸಿದೆ. ರಾಜ್ಯದ ಆಂತರಿಕ ಭದ್ರತಾ ವಿಭಾಗದ ಅತ್ಯಂತ ಹಿರಿಯ ಅಧಿಕಾರಿಯಾದ ಪೊಲೀಸ್ ಮಹಾನಿರ್ದೇಶಕ ಪ್ರಣವ ಮೊಹಾಂತಿ ಈ ಎಸ್‌ಐಟಿಯ ನೇತೃತ್ವ ವಹಿಸಲಿದ್ದಾರೆ. ತಂಡದಲ್ಲಿ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್. ಅನುಚೇತ್, ಸಿಎಆರ್ ಕೇಂದ್ರ ಕಚೇರಿಯ ಡಿಸಿಪಿ ಸೌಮ್ಯಲತಾ ಹಾಗೂ ಆಂತರಿಕ ಭದ್ರತಾ ವಿಭಾಗದ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಸದಸ್ಯರಾಗಿದ್ದಾರೆ.
ಇತ್ತೀಚೆಗಷ್ಟೇ ಪೌರಕಾರ್ಮಿಕನೊಬ್ಬ ನ್ಯಾಯಾಲಯದಲ್ಲಿ ನೀಡಿದ್ದ ಆಘಾತಕಾರಿ ಹೇಳಿಕೆಯು ಪ್ರಮುಖ ಪಾತ್ರ ವಹಿಸಿದೆ. “ನಾನು ಎರಡು ದಶಕಗಳ ಕಾಲ ನೂರಾರು ಶವಗಳನ್ನು ಹೂತಿದ್ದೇನೆ, ಅವುಗಳಲ್ಲಿ ಹಲವು ಅತ್ಯಾಚಾರಕ್ಕೊಳಗಾದ ಮಹಿಳೆಯರದ್ದಾಗಿತ್ತು” ಎಂಬ ಅವರ ಹೇಳಿಕೆಯು ರಾಜ್ಯವನ್ನು ಬೆಚ್ಚಿಬೀಳಿಸಿತ್ತು.
ಹೀಗಾಗಿ ಸಾರ್ವಜನಿಕರು ತನಿಖೆಗೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಎಸ್ ಐಟಿ ರಚನೆ ಮಾಡಿದೆ. ಈ ವಿಶೇಷ ತಂಡವು ಕೇವಲ ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ಪ್ರಕರಣವಷ್ಟೇ ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ದಾಖಲಾಗಬಹುದಾದ ದೂರುಗಳನ್ನೂ ತನಿಖೆಯ ವ್ಯಾಪ್ತಿಗೆ ತೆಗೆದುಕೊಳ್ಳಲಿದೆ. ತನಿಖೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕೆಂದು ಕೂಡ ಸರ್ಕಾರ ಸೂಚಿಸಿದೆ.


















