ಬೆಂಗಳೂರು: ಇದು ನಮ್ಮ ಮನೆ. ನಾವು ಕಷ್ಟಪಟ್ಟು ದುಡಿದ ಹಣದಲ್ಲಿ ಕಟ್ಟಿಸಿದ ಮನೆ. ಇದಕ್ಕೆ ಆಜೀವಪರ್ಯಂತ ನಾವೇ ಮಾಲೀಕರು ಎಂಬ ಭಾವನೆ ತುಂಬ ಜನರಲ್ಲಿ ಇರುತ್ತದೆ. ಇದು ನಿಜವೂ ಕೂಡ. ಆದರೆ, ಸ್ವಲ್ಪ ಯಾಮಾರಿದರೆ, ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳದಿದ್ದರೆ, ನಿಮ್ಮ ಮನೆಯಲ್ಲಿ 12 ವರ್ಷಗಳವರೆಗೆ ಬಾಡಿಗೆದಾರರು ವಾಸಿಸುತ್ತಿದ್ದರೆ, ಆ ಮನೆಗೆ ಅವರೇ ಮಾಲೀಕರಾಗುತ್ತಾರೆ. ಇದು ದೇಶದ ಕಾನೂನಿನಲ್ಲೇ ಇದೆ. ಹಾಗಾಗಿ, ಮನೆ ಮಾಲೀಕರು ಕೆಲವೊಂದು ಪ್ರಕ್ರಿಯೆ ಅನುಸರಿಸಬೇಕಾಗುತ್ತದೆ.
ಹೌದು, ಭಾರತದ ಕಾನೂನಿನಲ್ಲಿ ಪ್ರತಿಕೂಲ ಸ್ವಾಧೀನ (Adverse Possession) ಎಂಬ ಕಾನೂನಿದೆ. ಇದರ ಅನ್ವಯ ನಿಮ್ಮ ಆಸ್ತಿಯನ್ನು 12 ವರ್ಷ ನಿರಂತರವಾಗಿ ಬಳಸಿದರೆ, ಅವರು ಕಾನೂನುಬದ್ಧವಾಗಿ ಅದರ ಮಾಲೀಕತ್ವವನ್ನು ಪಡೆಯಬಹುದು. ಇದು ಮನೆ ಮಾಲೀಕರಿಗೆ ದೊಡ್ಡ ಸವಾಲಾಗಬಹುದು, ವಿಶೇಷವಾಗಿ ಬಾಡಿಗೆದಾರರು ಅಥವಾ ಅನಧಿಕೃತವಾಗಿ ಆಸ್ತಿಯನ್ನು ಬಳಸುವವರು ಈ ನಿಯಮವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ.
1963ರ ಲಿಮಿಟೇಶನ್ ಕಾಯ್ದೆ (Limitation Act) ಪ್ರಕಾರ, ಖಾಸಗಿ ಆಸ್ತಿಯನ್ನು 12 ವರ್ಷಗಳ ಕಾಲ ನಿರಂತರವಾಗಿ, ಮಾಲೀಕರ ಅನುಮತಿಯಿಲ್ಲದೆ ಬಳಸಿದವರು, ಆ ಆಸ್ತಿಯ ಮೇಲೆ ಕಾನೂನುಬದ್ಧ ಹಕ್ಕು ಪಡೆಯಬಹುದು. ಇದನ್ನೇ ಪ್ರತಿಕೂಲ ಸ್ವಾಧೀನ ಎಂದು ಕರೆಯಲಾಗುತ್ತದೆ.
ಬಾಡಿಗೆ ಕರಾರುಪತ್ರವಿಲ್ಲದೆ ಬಾಡಿಗೆದಾರರು ದೀರ್ಘಕಾಲ ಆಸ್ತಿಯನ್ನು ಬಳಸಿದರೆ, ನಿಮ್ಮ ಜಮೀನು ಅಥವಾ ಮನೆಯನ್ನು ಅನಧಿಕೃತವಾಗಿ ಇತರರು ಆಕ್ರಮಿಸಿದ್ದರೆ, ಮಾಲೀಕರು ತಮ್ಮ ಆಸ್ತಿಯ ಬಗ್ಗೆ ನಿರ್ಲಕ್ಷ್ಯ ತೋರಿದರೆ ಅತಿಕ್ರಮಣದಾರರು ಅದರ ಮಾಲೀಕತ್ವ ಹೊಂದುತ್ತಾರೆ. ಹಾಗಾಗಿ, ಯಾರಾದರೂ ನಿಮ್ಮ ಆಸ್ತಿಯನ್ನು ಅಕ್ರಮವಾಗಿ ಆಕ್ರಮಿಸಿದರೆ, ತಕ್ಷಣ ಪೊಲೀಸ್ ಅಥವಾ ನ್ಯಾಯಾಲಯದ ಸಹಾಯ ಪಡೆಯಿರಿ.
ಹಾಗಂತ ಮನೆಯ ಮಾಲೀಕರು ಆತಂಕಪಡುವುದು ಬೇಡ. ನೀವು 11 ತಿಂಗಳ ಬಾಡಿಗೆ ಒಪ್ಪಂದ ಮಾಡಿಕೊಳ್ಳದೆ ಮನೆಯನ್ನು ಬಾಡಿಗೆಗೆ ಕೊಡಬಾರದು. ಕೆಲವು ವರ್ಷಗಳಾದ ಬಳಿಕ ಮನೆಯ ಬಾಡಿಗೆದಾರರನ್ನು ಬದಲಿಸುತ್ತಿರಬೇಕು. ಮನೆಯ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಮನೆಯ ಬಾಡಿಗೆದಾರರು ಕರಾರುಪತ್ರವನ್ನು ಪ್ರತಿ ವರ್ಷ ನವೀಕರಿಸುವಂತೆ ನೋಡಿಕೊಳ್ಳಬೇಕು. ಆಗ ಮಾತ್ರ ಯಾರೂ ನಿಮ್ಮ ಮನೆಯ ಮಾಲೀಕತ್ವವನ್ನು ಕಸಿದುಕೊಳ್ಳಲಾರರು.



















