ಕಾರ್ಕಳದ ಪರಶುರಾಮರ ಪ್ರತಿಮೆಯ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸಿ ದೋಷಾರೋಪ ವರದಿಯನ್ನು ಸಲ್ಲಿಸಿರುವುದು ಒಳ್ಳೆಯ ಬೆಳವಣಿಗೆ.
ವರದಿಯಲ್ಲಿ ಮೂರ್ತಿಯ ಸೊಂಟದ ಕೆಳಭಾಗವನ್ನು ಪರೀಕ್ಷಿಸಿದ್ದು ಹಿತ್ತಾಳೆ ಮತ್ತು ಇನ್ನಿತರ ಸಾಮಗ್ರಿಗಳಿಂದ ತಯಾರಿಸಿದ್ದಾರೆ. ಮೇಲ್ಭಾಗವನ್ನು ತುಂಡಾಗಿ ಕತ್ತರಿಸಿ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಶಿಲ್ಪಿಯ ಜೊತೆ ಸೇರಿ ಅದನ್ನು ಅಲೆವೂರಿನ ಶೆಡ್ದ್ ಒಂದರಲ್ಲಿ ಮುಚ್ಚಿಟ್ಟು, ಸಾಕ್ಷಿ ನಾಶ, ನಂಬಿಕೆ ದ್ರೋಹ ಮಾಡಿದ್ದಾರೆ.
ಪ್ರತಿಮೆಯ ಸೊಂಟದ ಮೇಲ್ಬಾಗವನ್ನು ತನಿಖೆಗೂ ನೀಡಿಲ್ಲ. ತನಿಖಾ ತಂಡ ಈಗ ಪ್ರತಿಮೆ ಕಂಚಿದ್ದಲ್ಲ, ಹಿತ್ತಾಳೆಯದ್ದು ಎಂದು ಹೇಳುತ್ತಿದೆ ಇದು ಹಾಸ್ಯಾಸ್ಪದವಾಗಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ದಿವ್ಯ ನಾಯಕ್ ಹೇಳಿದ್ದಾರೆ.
ಚಾರ್ಜ್ ಶೀಟ್ ನಲ್ಲಿ ಶಿಲ್ಪಿಯೇ ಹೇಳಿಕೊಂಡಿರುವಂತೆ ಕಂಚನ್ನು ಬಳಸಿಲ್ಲ ಎಂದೂ ಮತ್ತು ತಾನು ಫೈಬರ್, ಹಿತ್ತಾಳೆ, ಕಬ್ಬಿಣ ಮುಂತಾದ ಲೋಹಗಳನ್ನು ಬಳಸಿದ್ದೆ ಎಂದು ಒಪ್ಪಿಕೊಂಡಿದದ್ದಾನೆ. ಉದ್ಘಾಟನೆಯ ಸಂದರ್ಭದಲ್ಲಿ ಮೂರ್ತಿ ಕಾಮಗಾರಿ ಪೂರ್ಣವಾಗಿಲ್ಲ ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳೇ ತಿಳಿಸಿದ್ದರೂ ಕೂಡ ತರಾತುರಿಯಲ್ಲಿ ಉದ್ಘಾಟನೆ ಮಾಡಲು ಬಣ್ಣ ಬಳಿದು ನೀಡಿರುವುದಾಗಿಯೂ ಹೇಳಿದ್ದಾನೆ ಇವೆಲ್ಲಾ ಪ್ರತಿಮೆಯ ಬಗ್ಗೆ ಸಂಶಯವಲ್ಲದೇ ಮತ್ತಿನ್ನೇನು ಎಂದವರು ಪ್ರಶ್ನಿಸಿದ್ದಾರೆ.
ಕಾರ್ಯಾನುದೇಶ ಕಂಚಿನ ಪ್ರತಿಮೆಯನ್ನು ನಿರ್ಮಿಸಲು ನೀಡಿದ್ದು ಹಿತ್ತಾಳೆ ಕಬ್ಬಿಣ ಫೈಬರ್ ಬಳಸಿ ಮೂರ್ತಿ ತಯಾರಿಸಿದ್ದು ಸ್ಪಷ್ಟವಾಗಿ ಸರಕಾರದ ಅನುದಾನವನ್ನು ದುರ್ಬಳಕೆ ಮಾಡಿ ಭ್ರಷ್ಟಾಚಾರ ನಡೆಸಿರುವುದಕ್ಕೆ ಕನ್ನಡಿ ಹಿಡಿದಂತೆ ಆಗಿದೆ. ಈ ಬಗ್ಗೆ ಮರು ತನಿಖೆ ನಡೆಯಬೇಕು, ಇಲ್ಲಿ ತನಿಖೆಯು ಸಂಪೂರ್ಣವಾಗಿ ನಡೆದಿಲ್ಲ ಮತ್ತು ಸಂಪೂರ್ಣ ತನಿಖೆ ನಡೆಸುವಂತೆ ನಾವು ಮತ್ತೊಮ್ಮೆ ಸರಕಾರದ ಕಾರ್ಯದರ್ಶಿಯವರಲ್ಲಿ ಮತ್ತು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದವರು ಹೇಳಿದ್ದಾರೆ.


















