ಬೆಂಗಳೂರು: ಮೊದಲೆಲ್ಲ ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಹೂಡಿಕೆ ಎಂದರೆ, ಶ್ರೀಮಂತರು, ಲಕ್ಷಾಂತರ ರೂಪಾಯಿ ಸಂಬಳದವರಿಗೆ ಸರಿ ಎಂಬ ಮಾತಿತ್ತು. ಆದರೀಗ ಕಾಲ ಬದಲಾಗಿದೆ. ತಿಂಗಳಿಗೆ 20 ಸಾವಿರ ರೂಪಾಯಿ ದುಡಿಯುವವರು ಕೂಡ ಮ್ಯೂಚುವಲ್ ಫಂಡ್ ಎಸ್ಐಪಿಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಇನ್ನು, ನಿವೃತ್ತಿ ಜೀವನವನ್ನು ಸುಖವಾಗಿ ಕಳೆಯಬೇಕು ಎಂದುಕೊಂಡವರು ಕೂಡ ಮಾಸಿಕ ಕೇವಲ 1,500 ರೂಪಾಯಿ ಹೂಡಿಕೆ ಮಾಡುವ ಮೂಲಕ ನಿವೃತ್ತಿಯ ವೇಳೆಗೆ ಕೋಟಿ ರೂ. ಗಳಿಕೆ ಮಾಡಬಹುದಾಗಿದೆ.
ಹೌದು, ಸರ್ಕಾರಿ ನೌಕರರಲ್ಲದವರು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರು ಕೆಲಸಕ್ಕೆ ಸೇರಿದ ತಕ್ಷಣ ನಿವೃತ್ತಿ ಜೀವನಕ್ಕಾಗಿ ಉಳಿತಾಯ ಮಾಡಿದರೆ, ಜೀವನದ ಇಳಿಸಂಜೆಯನ್ನು ಯಾರ ಹಂಗಿಲ್ಲದೇ ಕಳೆಯಬಹುದಾಗಿದೆ. ಮ್ಯೂಚುವಲ್ ಫಂಡ್ ಎಸ್ಐಪಿಯಲ್ಲಿ ಪ್ರತಿ ತಿಂಗಳು ಈಗಿನಿಂದಲೇ 1,500 ರೂಪಾಯಿ ಹೂಡಿಕೆ ಮಾಡಿದರೆ, 36 ವರ್ಷಗಳ ಬಳಿಕ ಒಂದು ಕೋಟಿ ರೂಪಾಯಿಯನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.
ಹೀಗಿದೆ ಹೂಡಿಕೆ ಲೆಕ್ಕಾಚಾರ
ನೀವು ಈಗಷ್ಟೇ ಕೆಲಸಕ್ಕೆ ಸೇರಿದ್ದೀರಿ, ವಯಸ್ಸು 24-25 ವರ್ಷ ಇದೆ ಎಂದಾದರೆ, ನೀವು ಈಗಿನಿಂದಲೇ ಹೂಡಿಕೆ ಮಾಡುವುದು ಒಳಿತು. SIP ಮ್ಯೂಚುವಲ್ ಫಂಡ್ ನಲ್ಲಿ ಪ್ರತಿ ತಿಂಗಳು 1,500 ರೂ. ಹೂಡಿಕೆ ಮಾಡುತ್ತಿದ್ದರೆ, 36 ವರ್ಷಗಳಲ್ಲಿ ನಿಮ್ಮ ಒಟ್ಟು ಹೂಡಿಕೆ 6,48,000 ರೂ. ಆಗಿರುತ್ತದೆ. ಇದಕ್ಕೆ ಕನಿಷ್ಠ ಶೇ.12ರಷ್ಟು ರಿಟರ್ನ್ಸ್ ಪಡೆದರೂ 1.03 ಕೋಟಿ ರೂ. ಆಗುತ್ತದೆ.
ಶೇ.12ರ ರಿಟರ್ನ್ಸ್ ಲೆಕ್ಕಾಚಾರದಲ್ಲಿ ಹೂಡಿಕೆ ಮಾಡಿದ 6.48 ಲಕ್ಷ ರೂ.ಗೆ 1,03,49,762 ರೂ. ಲಾಭ ಸಿಕ್ಕಿರುತ್ತದೆ. ಹೂಡಿಕೆ ಮೊತ್ತ ಹಾಗೂ ರಿಟರ್ನ್ಸ್ ಸೇರಿ 36 ವರ್ಷಗಳಲ್ಲಿ ನಿಮ್ಮ ಹೂಡಿಕೆಯ ಒಟ್ಟು ಮೊತ್ತ 1,09,97,762 ರೂ. ಆಗಿರುತ್ತದೆ. ಆಗ ನೀವು ಯಾವುದೇ ಸಮಸ್ಯೆ ಇಲ್ಲದೆ ನಿವೃತ್ತಿ ಜೀವನವನ್ನು ಕಳೆಯಬಹುದಾಗಿದೆ.
ಗಮನಿಸಿ: ಮ್ಯೂಚುವಲ್ ಫಂಡ್ ಹೂಡಿಕೆಯ ಲಾಭ-ನಷ್ಟವು ಮಾರುಕಟ್ಟೆಯ ಏರಿಳಿತದ ಮೇಲೆ ನಿರ್ಧಾರವಾಗಿರುತ್ತದೆ. ಅಂದರೆ, ಮ್ಯೂಚುವಲ್ ಫಂಡ್ ಎಸ್ಐಪಿ ಕೂಡ ರಿಸ್ಕ್ ಹೊಂದಿರುತ್ತದೆ. ನಾವು ಮಾಹಿತಿ ನೀಡುವ ದೃಷ್ಟಿಯಿಂದ ಮಾತ್ರ ಈ ಸ್ಟೋರಿಯನ್ನು ಪ್ರಕಟಿಸಿದ್ದೇವೆ. ಯಾವುದೇ ಮಾದರಿಯ ಹೂಡಿಕೆಗೂ ಮೊದಲು ತಜ್ಞರ ಸಲಹೆ ಸೂಚನೆ ಪಡೆಯುವುದು ಕಡ್ಡಾಯವಾಗಿದೆ.