ಮುಂಬೈ: ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. MI ನ್ಯೂಯಾರ್ಕ್ ತಂಡ 2025ರ ಮೇಜರ್ ಲೀಗ್ ಕ್ರಿಕೆಟ್ (MLC) ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಈ ಮೂಲಕ ಅಮೆರಿಕದ ಪ್ರಮುಖ ಟಿ20 ಟೂರ್ನಿಯಲ್ಲಿ ಕೇವಲ ಮೂರು ಆವೃತ್ತಿಗಳಲ್ಲಿ ಇದು ಎರಡನೇ ಚಾಂಪಿಯನ್‌ಪಟ್ಟವಾಗಿದೆ. ಮುಂಬೈ ಇಂಡಿಯನ್ಸ್‌ಗೆ ಜಾಗತಿಕವಾಗಿ ಒಲಿದ 13ನೇ ಪ್ರಮುಖ ಟಿ20 ಪ್ರಶಸ್ತಿ ಇದಾಗಿದ್ದು, 2025ರಲ್ಲಿ ಗೆದ್ದ ಮೂರನೇ ಟ್ರೋಫಿಯಾಗಿದೆ.
ರೋಚಕ ಫೈನಲ್‌ನಲ್ಲಿ MI ನ್ಯೂಯಾರ್ಕ್ ಪ್ರಾಬಲ್ಯ
ಭಾನುವಾರ ರಾತ್ರಿ ಡಲ್ಲಾಸ್‌ನಲ್ಲಿ ನಡೆದ MLC ಫೈನಲ್‌ನಲ್ಲಿ MI ನ್ಯೂಯಾರ್ಕ್ ಅಮೋಘ ಪ್ರದರ್ಶನ ನೀಡಿ ಪ್ರಾಬಲ್ಯ ಮೆರೆಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ MI ನ್ಯೂಯಾರ್ಕ್, ಕ್ವಿಂಟನ್ ಡಿ ಕಾಕ್ (46 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಹಿತ 77 ರನ್) ಅವರ ಬಿರುಸಿನ ಅರ್ಧಶತಕದ ನೆರವಿನಿಂದ 7 ವಿಕೆಟ್‌ಗೆ 180 ರನ್ ಕಲೆಹಾಕಿತು.
181 ರನ್‌ಗಳ ಗುರಿ ಬೆನ್ನಟ್ಟಿದ ವಾಷಿಂಗ್ಟನ್ ಫ್ರೀಡಂ ಪರ ರಚಿನ್ ರವೀಂದ್ರ (70) ಮತ್ತು ಗ್ಲೆನ್ ಫಿಲಿಪ್ಸ್ (ಅಜೇಯ 48) ಹೋರಾಟ ನಡೆಸಿದರು. ಆದರೆ, ಅಂತಿಮ ಓವರ್‌ನಲ್ಲಿ ವಾಷಿಂಗ್ಟನ್‌ಗೆ 12 ರನ್‌ಗಳ ಅಗತ್ಯವಿದ್ದಾಗ, ಯುವ ಮಧ್ಯಮ ವೇಗಿ ರುಶಿಲ್ ಉಗರ್ಕರ್ ಕೇವಲ 6 ರನ್ ನೀಡಿ 1 ವಿಕೆಟ್ ಪಡೆದು ಮಿಂಚಿದರು. ಇದರಿಂದ ವಾಷಿಂಗ್ಟನ್ ಫ್ರೀಡಂ 5 ವಿಕೆಟ್‌ಗೆ 175 ರನ್ ಗಳಿಸಲಷ್ಟೇ ಶಕ್ತವಾಯಿತು. MI ನ್ಯೂಯಾರ್ಕ್ ತಂಡ 5 ರನ್‌ಗಳ ರೋಚಕ ಗೆಲುವು ದಾಖಲಿಸಿತು.

ಟೂರ್ನಿಯ ಆರಂಭಿಕ 7 ಪಂದ್ಯಗಳಲ್ಲಿ 6ರಲ್ಲಿ ಸೋಲು ಕಂಡಿದ್ದ ನಿಕೋಲಸ್ ಪೂರನ್ ನಾಯಕತ್ವದ MI ನ್ಯೂಯಾರ್ಕ್, ನಂತರ ಪುಟಿದೆದ್ದು, 4ನೇ ಸ್ಥಾನಿಯಾಗಿ ಪ್ಲೇಆಫ್ ಪ್ರವೇಶಿಸಿ, ಸತತ 3 ಜಯದೊಂದಿಗೆ ಪ್ರಶಸ್ತಿಗೆ ಮುತ್ತಿಕ್ಕಿರುವುದು ವಿಶೇಷವಾಗಿದೆ.
ಮುಂಬೈ ಇಂಡಿಯನ್ಸ್‌ನ ಜಾಗತಿಕ ಯಶಸ್ಸಿನ ಪತಾಕೆ
ಹಾಲಿ ವರ್ಷದಲ್ಲಿ ಮುಂಬೈ ಇಂಡಿಯನ್ಸ್ ತಂಡಗಳು ಮೂರು ಖಂಡಗಳಲ್ಲಿನ ಐದು ಲೀಗ್‌ಗಳಲ್ಲಿ ಸ್ಪರ್ಧಿಸಿವೆ. ಎಲ್ಲಾ ಐದರಲ್ಲೂ ಪ್ಲೇಆಫ್ ಪ್ರವೇಶಿಸಿದ್ದು, ಇದೀಗ ಮೂರರಲ್ಲಿ ಚಾಂಪಿಯನ್‌ಗಳಾಗಿ ಹೊರಹೊಮ್ಮಿರುವುದು ಗಮನಾರ್ಹ. ಈ ಹಿಂದೆ MI ಕೇಪ್‌ಟೌನ್ ತಂಡ ದಕ್ಷಿಣ ಆಫ್ರಿಕಾದ SA20 ಟೂರ್ನಿ ಮತ್ತು ಈ ವರ್ಷದ ಆರಂಭದಲ್ಲಿ ಮುಂಬೈ ಇಂಡಿಯನ್ಸ್ ಮಹಿಳಾ ತಂಡ ಡಬ್ಲ್ಯುಟಿಸಿನಲ್ಲಿ ಪ್ರಶಸ್ತಿ ಗೆದ್ದುಕೊಂಡಿತ್ತು.
ನೀತಾ ಎಂ. ಅಂಬಾನಿ ಅವರು, “ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ಇದು ನಿಜವಾಗಿಯೂ ಒಂದು ವಿಶೇಷ ಕ್ಷಣ. ಇದು ಕೇವಲ ಮೈದಾನದ ಗೆಲುವಲ್ಲ, ಇದು ಉತ್ಸಾಹ, ನಂಬಿಕೆ ಮತ್ತು ಸಂಘಟಿತ ಶಕ್ತಿಯ ಸಂಭ್ರಮವಾಗಿದೆ. ನಮ್ಮ ಎಲ್ಲಾ ಅಭಿಮಾನಿಗಳಿಗೆ (MI ಪಾಲ್ಟನ್), ಯಾವಾಗಲೂ ನಮ್ಮೊಂದಿಗೆ ನಿಂತಿರುವ ಮತ್ತು ನಮ್ಮ ಪ್ರಯಾಣದ ಹೃದಯಭಾಗದಲ್ಲಿ ಇರುವವರಿಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ಪ್ರತಿಯೊಬ್ಬ ಆಟಗಾರ, ತರಬೇತುದಾರ, ಬೆಂಬಲಿಗರು ಮತ್ತು ನಮ್ಮ ಜಾಗತಿಕ MI ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ನನ್ನ ಅಭಿನಂದನೆಗಳು” ಎಂದು ಹೇಳಿದರು.
ಆಕಾಶ್ ಎಂ. ಅಂಬಾನಿ ಅವರು, “ಮುಂಬೈ ಇಂಡಿಯನ್ಸ್ ಭಾಗವಾಗಿರುವ ನಮಗೆಲ್ಲರಿಗೂ ಇದು ಹೆಮ್ಮೆಯ ಕ್ಷಣ. MI ನ್ಯೂಯಾರ್ಕ್ ಎರಡನೇ ಬಾರಿ ಎಂಎಲ್ಸಿ ಪ್ರಶಸ್ತಿ ಎತ್ತಿ ಹಿಡಿದಿರುವುದು ಅತ್ಯಂತ ತೃಪ್ತಿಕರ ಸಾಧನೆಯಾಗಿದೆ. ಈ ಯಶಸ್ಸು ನಮ್ಮ ತಂಡಗಳ ನಂಬಿಕೆ, ಸಂಸ್ಕೃತಿ ಮತ್ತು ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಕ್ಷಣವನ್ನು ಸಾಧ್ಯವಾಗಿಸಿದ MI ನ್ಯೂಯಾರ್ಕ್ ತಂಡದ ಪ್ರತಿಯೊಬ್ಬ ಸದಸ್ಯರಿಗೂ ಅಭಿನಂದನೆಗಳು” ಎಂದು ತಿಳಿಸಿದರು.
ಮುಂಬೈ ಇಂಡಿಯನ್ಸ್ ಜಾಗತಿಕ ಟಿ20 ಲೀಗ್‌ಗಳಲ್ಲಿ ಅತ್ಯಂತ ಯಶಸ್ವಿ ಫ್ರಾಂಚೈಸಿ ಎನಿಸಿಕೊಂಡಿದೆ. ಇದರ ಒಟ್ಟು 13 ಚಾಂಪಿಯನ್‌ಶಿಪ್ ಗೆಲುವುಗಳಲ್ಲಿ 5 ಐಪಿಎಲ್ ಪ್ರಶಸ್ತಿಗಳು, 2 ಮಹಿಳಾ ಪ್ರೀಮಿಯರ್ ಲೀಗ್ ಪ್ರಶಸ್ತಿಗಳು, 2 ಮೇಜರ್ ಲೀಗ್ ಕ್ರಿಕೆಟ್ ಪ್ರಶಸ್ತಿಗಳು, 2 ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿಗಳು ಮತ್ತು ತಲಾ ಒಂದು ಐಎಲ್‌ಟಿ20 (MI ಎಮಿರೇಟ್ಸ್, 2024) ಮತ್ತು SA20 (MI ಕೇಪ್‌ಟೌನ್, 2025) ಪ್ರಶಸ್ತಿಗಳು ಸೇರಿವೆ. MI ಫ್ರಾಂಚೈಸಿಯು ಮೂರು ಖಂಡಗಳು ಮತ್ತು ನಾಲ್ಕು ದೇಶಗಳಲ್ಲಿ ಒಟ್ಟು ಐದು ತಂಡಗಳನ್ನು ಹೊಂದಿದೆ.



















