ಬಿಜೆಪಿ ಹೈಕಮಾಂಡ್‌ಗೆ ಕಾಂಗ್ರೆಸ್ ನ 55 ಶಾಸಕರ ಟಾರ್ಗೆಟ್ ಲಿಸ್ಟ್ ಇದೆ. ಅದರಲ್ಲಿ ನಾನು ಇದ್ದರೂ ಇರಬಹುದು ಎಂದು ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ಹೊಸ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಡಿಕೆಶಿ ಮತ್ತು ಸಿದ್ದು ಬಣದಿಂದ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ಜೋಶಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಬಿಜೆಪಿಗರ ಬೆದರಿಕೆಗೆ ನಾನು ಹೆದರುವುದಿಲ್ಲ. ಬಗ್ಗುವುದೂ ಇಲ್ಲ. ಬಿಜೆಪಿಯವರು ಒಮ್ಮೆಯಾದ್ರೂ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದಿದ್ದಾರಾ? ಅವರು ರಾಜಕೀಯ ಇತಿಹಾಸದಲ್ಲೇ ರಾಜ್ಯದಲ್ಲಿ ಏಕಾಂಗಿಯಾಗಿ ಅಧಿಕಾರ ಪಡೆದಿಲ್ಲ.
ಸಮ್ಮಿಶ್ರ ಸರ್ಕಾರ, ಹಿಂಬಾಗಿಲಿನಿಂದ ಬಂದು ಅಧಿಕಾರ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಕಳೆದ ವರ್ಷ ದುಡ್ಡು ಕೊಟ್ಟು ಅಧಿಕಾರಕ್ಕೆ ಬಂದಿದೆ. ನಿಚ್ಚಳ ಬಹುಮತ ಇರಲಿಲ್ಲ. ಇದೆಲ್ಲಾ ಜನರಿಗೆ ಗೊತ್ತಿದೆ. ಬಿಜೆಪಿಗರು ಯಾವುತ್ತೂ ಅಧಿಕಾರಕ್ಕೆ ಬರುವುದಿಲ್ಲ. ಅದು ಅವರಿಗೆ ಗೊತ್ತಾಗಿದೆ. ಹಾಗಾಗಿ ಅವರು ಕುತಂತ್ರ ರಾಜಕಾರಣವನ್ನೇ ಮಾಡಬೇಕು.
ಇವತ್ತು ಕೂಡ ಅದೇ ತಂತ್ರವನ್ನು ಹೂಡುತ್ತಿದ್ದಾರೆ. ಯಾರನ್ನಾದ್ರೂ ಎತ್ತಿ ಕಟ್ಟಿ ಸರ್ಕಾರ ಬೀಳಿಸೋ ಪ್ರಯತ್ನ ಮಾಡಲಾಗುತ್ತಿದೆ. ಸಿಬಿಐ , ಇಡಿ ದಾಳಿಗಳನ್ನು ಹೆದರಿಸಲು ಮಾಡುತ್ತಿದ್ದಾರೆ. ಬಿಜೆಪಿಗೆ ಕಾಂಗ್ರೆಸ್ ಶಾಸಕರು ಬರದೇ ಹೋದರೆ ಇಡಿ, ಸಿಬಿಐ ದಾಳಿ ಮಾಡಿ ಹೆದರಿಸುತ್ತಾರೆ. ಹೀಗಾಗಿ ನನ್ನನ್ನು ಸೇರಿ ನಮ್ಮೆಲ್ಲ ಶಾಸಕರಿಗೆ ಭಯ ಇದೆ ಎಂದಿದ್ದಾರೆ.



















