ಬೆಂಗಳೂರು: ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ರಾಜ್ಯಾದ್ಯಂತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಖಾಲಿ ಇರುವ 6,770 ಗ್ರೂಪ್-ಡಿ ಹುದ್ದೆಗಳನ್ನು ಹೊರಗುತ್ತಿಗೆ ಅನ್ವಯ ಭರ್ತಿ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದಾಗಿ ರಾಜ್ಯದ ಸಾವಿರಾರು ಜನರಿಗೆ ಉದ್ಯೋಗ ಸಿಗಲಿದೆ.
ರಾಜ್ಯ ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಿದಂತೆ, 2019-20ನೇ ಸಾಲಿಗೆ ಆಸ್ಪತ್ರೆಗಳಲ್ಲಿ ಖಾಲಿ ಇರುವ ಗ್ರೂಪ್-ಡಿ ಹುದ್ದೆಗಳಲ್ಲಿ ಶೇ.30 ರಷ್ಟು ನಾನ್-ಕ್ಲಿನಿಕಲ್ ಹಾಗೂ ಶೇ.45 ರಷ್ಟು ಗ್ರೂಪ್-ಡಿ ಹುದ್ದೆಗಳನ್ನು ಒಟ್ಟಾರೆಯಾಗಿ ಶೇ.75 ಮೀರದಂತೆ ಈ ಹಿಂದಿನ ಟೆಂಡರ್ ನಿಯಮಗಳನ್ನು ಪಾಲಿಸಿಕೊಂಡು ಹಾಗೂ ಹೊರಗುತ್ತಿಗೆ ಸಂಪನ್ಮೂಲದಡಿ ಟೆಂಡರ್ ಕರೆಯಲು ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಲಾಗಿದೆ.
ರಾಜ್ಯವಲಯದ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ರೋಗಿಗಳ ಹಿತದೃಷ್ಠಿಯಿಂದ ಆಸ್ಪತ್ರೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಮತ್ತು ಸಾರ್ವಜನಿಕರಿಗೆ ಹೆಚ್ಚಿನ/ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಪ್ರಸ್ತುತ ಚಾಲ್ತಿಯಲ್ಲಿರುವ ಗ್ರೂಪ್-ಡಿ ಖಾಲಿ ಹುದ್ದೆಗಳಿಗೆ ಎದುರಾಗಿ ಪಡೆದುಕೊಳ್ಳುತ್ತಿರುವ ಶೇ.75ರ ಬದಲಿಗೆ ಶೇ 100% ರಷ್ಟು ಗ್ರೂಪ್-ಡಿ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುವ ಬಗ್ಗೆ ಆದೇಶ ಹೊರಡಿಸಲಾಗಿದೆ.
ಷರತ್ತುಗಳು ಏನೇನು?
- ಶೇ.80ರಷ್ಟು ಹುದ್ದೆಗಳಲ್ಲಿ ಶೇ.40 ರಷ್ಟು ನಾನ್-ಕ್ಲಿನಿಕಲ್ ಹುದ್ದೆಗಳನ್ನು ಸೇವಾ ಗುತ್ತಿಗೆ ಆಧಾರದ ಮೇಲೆ (Service Contract) ಹಾಗೂ ಶೇ.40 ರಷ್ಟು ಗ್ರೂಪ್-ಡಿ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ (Out Source) ಭರ್ತಿ ಮಾಡಲು ಕ್ರಮವಹಿಸಬೇಕು.
- ಆಯುಕ್ತರು ರಾಜ್ಯವಲಯದ ಪ್ರತಿ ಕಚೇರಿ / ತಾಲೂಕು / ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರಮಾಣಿತ ಸಿಬ್ಬಂದಿ ಮಾದರಿಯನ್ನು (Standard Staffing Pattern) ಅಳವಡಿಸಿಕೊಳ್ಳಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆಯನ್ನು ಪಡೆಯಬೇಕು.
- ಇಲಾಖೆಗೆ ಒದಗಿಸಲಾದ ಅನುದಾನದಲ್ಲಿ ಸುಮಾರು 50 ಕೋಟಿ ರೂಪಾಯಿಗಳ ಪುನರ್ವಿನಿಯೋಗಕ್ಕಾಗಿ ಗುರುತಿಸಿ ಪ್ರಸ್ತಾವನೆ ಸಲ್ಲಿಸಬೇಕು.
- ಸರ್ಕಾರದ ಆದೇಶ ಸಂಖ್ಯೆ: ಆಕುಕ 81 ಎಚ್ಎಎಂ 2025, ದಿನಾಂಕ: 22-5-2025 ರಲ್ಲಿನ ಮಾನದಂಡ / ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಖಾಲಿಯಿರುವ ಹುದ್ದೆಗಳ ಎದುರಾಗಿ ಗುತ್ತಿಗೆ / ಹೊರಗುತ್ತಿಗೆ ಮುಖಾಂತರ ಹುದ್ದೆಗಳನ್ನು ಭರ್ತಿ ಮಾಡತಕ್ಕದ್ದು, ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 38 ಎಫ್.ಆರ್.ಸಿ. 2025 (1653051), ದಿನಾಂಕ: 10-06-2025 ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.