ಮಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ಧರ್ಮಗಳ ವಿರುದ್ಧ ದ್ವೇಷ ಹಬ್ಬಿಸುವುದು, ಬೇರೆ ಧರ್ಮಗಳ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡುವುದು. ದ್ವೇಷ ಭಾಷಣ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದ ಕಾಪಾಡುವ ಬಗ್ಗೆ ಚರ್ಚಿಸಲು ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಾಮರಸ್ಯ ಕದಡುವ ಪ್ರತಿಯೊಂದು ನಡೆಯನ್ನೂ ಮಟ್ಟ ಹಾಕಬೇಕು. ಡ್ರಗ್ಸ್, ಜೂಜು, ಮರಳು ದಂಧೆ ಸೇರಿದಂತೆ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಬೇಕು. ತಾರತಮ್ಯ ಮಾಡದೇ ಕಾನೂನನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಬೇಕು ಎಂದು ಸೂಚಿಸಿದ್ದಾರೆ.
ರಾಜಕೀಯ ಪಕ್ಷದವರು, ಶಿಕ್ಷಣ-ಧಾರ್ಮಿಕ ಸಂಘ ಸಂಸ್ಥೆಗಳು ಮತ್ತು ವಿವಿಧ ಸಮುದಾಯಗಳ ಮುಖಂಡರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಬಲಪಡಿಸುವ ಅನಿವಾರ್ಯವನ್ನು ಒತ್ತಿ ಹೇಳಿದ್ದಾರೆ.
ಕೋಮು ಹಿಂಸೆಯಲ್ಲಿ ತೊಡಗುವವರ ಜೊತೆಗೆ ಅವರ ಮನಸ್ಸಿನಲ್ಲಿ ದ್ವೇಷ ತುಂಬುವುದಕ್ಕೆ ಕಾರಣವಾಗುವ ಸೂತ್ರಧಾರಿಗಳ ವಿರುದ್ಧವೂ ಕ್ರಮವಾಗಬೇಕು. ಕೋಮು ಹತ್ಯೆಗಳಿಗೆ ಹಣಕಾಸು ನೆರವು ನೀಡುವವರನ್ನು ಗುರುತಿಸಿ ಸದೆಬಡಿಯಬೇಕು ಎಂದು ಹೇಳಿದ್ದಾರೆ.
ಸರ್ಕಾರದ ಹಾಗೂ ಪೊಲೀಸರ ನಡೆಗಳು ತಾರತಮ್ಯದಿಂದ ಕೂಡಿದ್ದರೆ ಅದು ಅಪನಂಬಿಕೆ ಮೂಡಿಸುತ್ತದೆ ಎಂದು ಕಿವಿ ಮಾತು ಹೇಳಿದರು.
ಗೋಹತ್ಯೆಯಂತಹ ವಿಚಾರ ಹೇಗೆ ಘರ್ಷಕ್ಕೆ ಕಾರಣವಾಗುತ್ತದೆ ಎಂದು ಹಲವು ಬಿಜೆಪಿ ಶಾಸಕರು ಈ ಸಂದರ್ಭದಲ್ಲಿ ಹೇಳಿದರು. ಸಭೆಯಲ್ಲಿ ವ್ಯಕ್ತವಾದ ಸಲಹೆಗಳ ಬಗ್ಗೆ ಚರ್ಚಿಸಿ ಕ್ರಮಕೈಗೊಳ್ಳುತ್ತೇವೆ ಎಂದು ಗೃಹ ಸಚಿವರು ಭರವಸೆ ನೀಡಿದರು.



















