ಉಡುಪಿ: ಜುಲೈ 12ರಂದು ಜಿಲ್ಲೆಯಲ್ಲಿ ರಾಷ್ಟೀಯ ಲೋಕ ಅದಾಲತ್ ನಡೆಯಲಿದೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಉಡುಪಿ, ಕಾರ್ಕಳ, ಕುಂದಾಪುರ ಮತ್ತು ಬೈಂದೂರಿನ ನ್ಯಾಯಾಲಯಗಳ ಆವರಣದಲ್ಲಿ ಜುಲೈ 12ರಂದು ಲೋಕ ಅದಾಲತ್ ನೆಡೆಯಲಿದೆ.
ನ್ಯಾಯಾಲಯದಲ್ಲಿರುವ 35 ಸಾವಿರ ಪ್ರಕರಣಗಳ ಪೈಕಿ ರಾಜಿಯಾಗಬಲ್ಲ 4900 ಪ್ರಕರಣವನ್ನು ಜುಲೈ 12 ರಂದು ಅದಾಲತ್ ಗೆ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಲಯದ ನ್ಯಾಯಧೀಶ ಹಾಗೂ ಜಿಲ್ಲಾ ಪ್ರಾಧಿಕಾರದ ಅಧ್ಯಕ್ಷ ಕಿರಣ್ ಎಸ್ ಗಂಗಣ್ಣನವರ್ ತಿಳಿಸಿದ್ದಾರೆ.
ಒಂದು ವೇಳೆ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣಗಳು ರಾಜಿ ಮೂಲಕ ಇತ್ಯರ್ಥಗೊಂಡರೆ ನ್ಯಾಯಾಲಯಕ್ಕೆ ಪಾವತಿಸಿದ ಶುಲ್ಕವನ್ನು ವಾಪಸ್ಸು ನೀಡಲಾಗುತ್ತದೆ. ಜನರಿಗೆ ಪ್ರಕರಣ ದಾಖಲಿಸುವಾಗ ಇರುವ ಹುಮ್ಮಸ್ಸು ಒಂದೆರಡು ವಿಚಾರಣೆಗಳ ನಂತರ ಕಮರಿ ಹೋಗಿರುತ್ತದೆ. ಸಾಕಪ್ಪ ಈ ಕೋರ್ಟು ಕಚೇರಿ ತಿರುಗಾಟ ಎನ್ನುವ ಮನಸ್ಥಿತಿಗೆ ಬಂದಿರುತ್ತಾರೆ. ರಾಜಿಯಾಗಬಲ್ಲ ಪ್ರಕರಣಗಳಿಗೆ ಕೋರ್ಟ್ ಮೆಟ್ಟಿಲೇರಿರುವ ವ್ಯಕ್ತಿಗಳಿಗೆ ಇದೊಂದು ಸದವಕಾಶವಾಗಿದ್ದು, ಹೆಚ್ಚಿನ ಪ್ರಕರಣಗಳು ಇತ್ಯರ್ಥವಾಗುವ ಸಾಧ್ಯತೆ ಇದೆ. ಹೀಗಾಗಿ ಲೋಕ ಅದಾಲತ್ ನಲ್ಲಿ ಭಾಗವಹಿಸಲು ಸಲಹೆ ನೀಡಲಾಗುತ್ತಿದೆ.