ಯಾದಗಿರಿ : ತಿಪ್ಪಟನಟನಗಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆ ಘಟನೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪತ್ರ ಬರೆದಿದ್ದಾರೆ.
ಕಲುಷಿತ ನೀರು ಸೇವನೆ ಘಟನೆ ಬಗ್ಗೆ ಪತ್ರ ಬರೆಯಲಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 3 ಜನ ಸಾವನ್ನಪ್ಪಿದ್ದು, 6 ಜನರ ಸ್ಥಿತಿ ಗಂಭೀರವಾಗಿದೆ. ಅಲ್ಲದೇ, ಸಾವಿನ ಸಂಖ್ಯೆ ಹೆಚ್ಚಾಗುವ ಸಂಭವಿದೆ. ಕುಡಿಯುವ ನೀರಿನ ವಿಷಯದಲ್ಲಿ ಯಾಕಿಷ್ಟು ನಿರ್ಲಕ್ಷ್ಯ? ಇಂತಹ ಸಮಸ್ಯೆಗಳನ್ನು ಶಾಶ್ವತವಾಗಿ ಸರಿಪಡಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡಬೇಕು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಜನರ ಪ್ರಾಣ ಹಾನಿಗಳು ಜಿಲ್ಲೆಯಲ್ಲಿ ಸಂಭವಿಸುತ್ತಿದ್ದರೂ ಜಿಲ್ಲಾಡಳಿತ ಹಾಗೂ ಸರಕಾರ ಎಚ್ಚೆತ್ತುಕೊಳ್ಳದೇ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿರುವಂತಿದೆ. ಈ ರೀತಿಯ ಘಟನೆ ನಡೆಯದಂತೆ ಯಾವ ರೀತಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಕಲುಷಿತ ನೀರು ಪೂರೈಕೆ ಮಾಡಿ ಕರ್ತವ್ಯ ಲೋಪ ಎಸಗಿದವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಪತ್ರ ಬರೆದಿದ್ದಾರೆ.