ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕುತೂಹಲದ ನಡುವೆ ಭಿನ್ನರ ಚಟುವಟಿಕೆ ಜೋರಾಗಿದೆ. ಇದರ ನಡುವೆ ಮಾಜಿ ಸಂಸದ ಅರವಿಂದ ಲಿಂಬಾವಳಿ, ಬಿಎಸ್ ಯಡಿಯೂರಪ್ಪ ವಿರುದ್ದ ಗುಡುಗಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಬಿಜೆಪಿ ತೊರೆದು ಹೋಗಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಮನೆ ಬಾಗಿಲು ಬಡಿದು, ಮತ್ತೇಕೆ ಪಕ್ಷಕ್ಕೆ ಮರಳಿದರೋ ಗೊತ್ತಿಲ್ಲ ಎಂದು ಲಿಂಬಾವಳಿ ಕಿಡಿ ಕಾರಿದ್ದಾರೆ.
ಜಿ.ಎಂ. ಸಿದ್ದೇಶ್ವರ ಅಭಿಮಾನಿ ಬಳಗ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಅವರ 74ನೇ ಜನ್ಮದಿನದ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ‘ನಮ್ಮಾಭಿಮಾನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆಡಿಎಸ್–ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಬಿ.ಎಸ್. ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಲು, ಮುಖ್ಯಮಂತ್ರಿ ಹುದ್ದೆಗೆ ಏರಲು ಜಿ.ಎಂ. ಸಿದ್ದೇಶ್ವರ ಪರಿಶ್ರಮವಿದೆ. ಆರ್ಥಿಕ ಶಕ್ತಿಯಾಗಿ, ಹೆಗಲಿಗೆ ಹೆಗಲು ಕೊಟ್ಟು ಜೊತೆಗಿದ್ದ ಸ್ನೇಹಿತನನ್ನು ಯಡಿಯೂರಪ್ಪ ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ ಬೇಸರವಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಯಡಿಯೂರಪ್ಪ ಅವರು ಶಿಕಾರಿಪುರದಲ್ಲಿ ಗೆಲ್ಲಲು ಕೂಡ ಜಿ.ಎಂ.ಸಿದ್ದೇಶ್ವರ ಕಾರಣ. ಅಲ್ಲಿದ್ದ ಅಸಮಾಧಾನ, ಸಮಸ್ಯೆ ಸ್ವತಃ ಸರಿಪಡಿಸಿದ್ದಾರೆ. ಅನಂತಕುಮಾರ್ ಅವರೊಂದಿಗೆ ಸಮಸ್ಯೆ ಎದುರಾದಾಗ ನಾವು ಸಂಪರ್ಕ ಮಾಡುತ್ತಿದ್ದದ್ದು ಸಿದ್ದೇಶ್ವರ ಅವರನ್ನೇ. ಅವರ ಮೂಲಕ ಮಾತನಾಡಿಸಿ ರಾಜ್ಯ ಮಟ್ಟದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದೇವೆ. ಸಿದ್ದೇಶ್ವರ ಕುಟುಂಬಕ್ಕೆ ಆಗಿರುವ ಅನ್ಯಾಯ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.