ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖಾರ್ ಅವರು ಸುದ್ದಿವಾಹಿನಿಯೊಂದರ ನೇರ ಪ್ರಸಾರದಲ್ಲೇ ತೀವ್ರ ಮುಜುಗರದ ಕ್ಷಣವನ್ನು ಎದುರಿಸಿದ ಘಟನೆ ನಡೆದಿದೆ. ಜಾಗತಿಕವಾಗಿ ನಿಷೇಧಿಸಲ್ಪಟ್ಟ ಭಯೋತ್ಪಾದಕನೊಬ್ಬನನ್ನು “ಸಾಮಾನ್ಯ ಮನುಷ್ಯ” ಎಂದು ಬಿಂಬಿಸಲು ಪ್ರಯತ್ನಿಸಿದ ಅವರು, ನಂತರ ಎಲ್ಲರ ಎದುರೇ ಮುಖಭಂಗಕ್ಕೊಳಗಾಗಿದ್ದಾರೆ.
ಅಲ್ ಜಜೀರಾ ಜೊತೆಗಿನ ಸಂದರ್ಶನವೊಂದರಲ್ಲಿ, ಖಾರ್ ಅವರು ಮೇ 7ರಂದು ಭಾರತದ “ಆಪರೇಷನ್ ಸಿಂದೂರ” ದಲ್ಲಿ ಹತ್ಯೆಗೀಡಾದ ಭಯೋತ್ಪಾದಕರ ಅಂತ್ಯಕ್ರಿಯೆಯ ಸಾರಥ್ಯ ವಹಿಸಿದ್ದ ಹಫೀಜ್ ಅಬ್ದುರ್ ರೌಫ್ ಒಬ್ಬ ಸಾಮಾನ್ಯ ಪಾಕಿಸ್ತಾನಿ ಮನುಷ್ಯ ಎಂದು ಸಮರ್ಥಿಸಲು ಪ್ರಯತ್ನಿಸಿದ್ದಾರೆ. ಆದರೆ, ಈತ ಅಮೆರಿಕ ಬಿಡುಗಡೆ ಮಾಡಿರುವ ಭಯೋತ್ಪಾದಕರ ಪಟ್ಟಿಯಲ್ಲಿರುವ ವ್ಯಕ್ತಿ ಎಂದು ಭಾರತ ಈ ಹಿಂದೆಯೇ ಹೇಳಿಕೊಂಡಿತ್ತು.
ಉಗ್ರರ ಅಂತ್ಯಕ್ರಿಯೆಯನ್ನು ಮುನ್ನಡೆಸಿದ ರೌಫ್ ಫೋಟೋವನ್ನು ತೋರಿಸುತ್ತಾ ಸುದ್ದಿವಾಹಿನಿ ಜತೆ ಮಾತನಾಡಿದ ಖಾರ್, “ಇದು ನೀವು (ಭಾರತ) ಹೇಳಿಕೊಳ್ಳುತ್ತಿರುವ ವ್ಯಕ್ತಿ ಅಲ್ಲ ಎಂದು ನಾನು ನಿಮಗೆ ಅಧಿಕಾರಯುತವಾಗಿ, ಜಗತ್ತಿನಾದ್ಯಂತ ಹಂಚಿಕೊಳ್ಳಲಾದ ಪುರಾವೆಗಳೊಂದಿಗೆ ಹೇಳುತ್ತಿದ್ದೇನೆ. ಪಾಕಿಸ್ತಾನದಲ್ಲಿ ಲಕ್ಷಾಂತರ ಅಬ್ದುಲ್ ರೌಫ್‌ಗಳಿದ್ದಾರೆ,” ಎಂದು ಹೇಳಿದ್ದಾರೆ.
ಆಗ ಸುದ್ದಿವಾಹಿನಿಯ ನಿರೂಪಕರು ಮಧ್ಯಪ್ರವೇಶಿಸಿ, “ಆಪರೇಷನ್ ಸಿಂದೂರ” ಕಾರ್ಯಾಚರಣೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನ ಸೇನೆ ಕೂಡ “ಈ ಫೋಟೋ ನಕಲಿ” ಎಂದು ಹೇಳಿಲ್ಲವಲ್ಲ ಎಂದು ಗಮನಸೆಳೆದರು. “ಪಾಕ್ ಸೇನೆಯು ಆತನನ್ನು ರಾಜಕೀಯ ಪಕ್ಷದ ಸದಸ್ಯ ಎಂದು ಹೇಳಿದೆ. ಆತನ ರಾಷ್ಟ್ರೀಯ ಐಡಿ ಸಂಖ್ಯೆಯನ್ನೂ ಬಿಡುಗಡೆ ಮಾಡಿದೆ. ಆ ಐಡಿ ಸಂಖ್ಯೆ ಮತ್ತು ಅಮೆರಿಕದ ಉಗ್ರರ ಪಟ್ಟಿಯಲ್ಲಿರುವ ವ್ಯಕ್ತಿಯ ಐಡಿಯೂ ಒಂದೇ ಆಗಿದೆ. ಹಾಗಾಗಿ, ಅಮೆರಿಕದ ನಿರ್ಬಂಧಿತ ಭಯೋತ್ಪಾದಕರ ಪಟ್ಟಿಯ ಪ್ರಕಾರ, ಈ ವ್ಯಕ್ತಿ ಭಯೋತ್ಪಾದಕ,” ಎಂದು ಹೇಳಿದರು.
ಇದರಿಂದ ತೀವ್ರ ಇರುಸುಮುರುಸಿಗೊಳಗಾದ ಹೀನಾ ಖಾರ್, ಮುಖ ಉಳಿಸಿಕೊಳ್ಳಲು ಪ್ರಯತ್ನಿಸಿ, “ಪಾಕಿಸ್ತಾನ ಸೇನೆ ಈ ವ್ಯಕ್ತಿಯನ್ನು ಸಮರ್ಥಿಸಿಕೊಳ್ಳುತ್ತಿದೆಯೇ ವಿನಾ ಅಮೆರಿಕ ನಿಷೇಧಿಸಿರುವ ವ್ಯಕ್ತಿಯನ್ನು ಸಮರ್ಥಿಸಿಕೊಳ್ಳುತ್ತಿಲ್ಲ” ಎಂದು ಹೇಳಿದರು. “ಐಎಸ್‌ಪಿಆರ್ (ಪಾಕಿಸ್ತಾನ ಸೇನೆಯ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್) ಇದು ಆ ವ್ಯಕ್ತಿ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದೆ” ಎಂದು ತಡಬಡಾಯಿಸತೊಡಗಿದರು.
ರೌಫ್ ಕುರಿತು ಪಾಕಿಸ್ತಾನದ ಸುಳ್ಳಿನ ಕಂತೆ
ಆಪರೇಷನ್ ಸಿಂದೂರದ ಬಳಿಕ ಅಂತ್ಯಕ್ರಿಯೆಯಲ್ಲಿ ರೌಫ್ ಪಾಲ್ಗೊಂಡ ಚಿತ್ರಗಳು ಹೊರಬಿದ್ದ ತಕ್ಷಣ, ಪಾಕಿಸ್ತಾನ ಸೇನೆ ಮುಖ ಉಳಿಸಿಕೊಳ್ಳಲು ಪ್ರಯತ್ನಿಸಿತ್ತು. ಆತನನ್ನು “ಸಾಮಾನ್ಯ ಮನುಷ್ಯ” ಎಂದು ಕರೆದಿತ್ತು. ಪಾಕಿಸ್ತಾನದ ಐಎಸ್‌ಪಿಆರ್‌ನ ಡೈರೆಕ್ಟರ್ ಜನರಲ್ ಅಹ್ಮದ್ ಷರೀಫ್ ಚೌಧರಿ, “ಆಪರೇಷನ್ ಸಿಂದೂರ” ಸಮಯದಲ್ಲಿ ಹತ್ಯೆಗೀಡಾದವರ ಅಂತ್ಯಕ್ರಿಯೆಯ ಪ್ರಾರ್ಥನೆಗಳನ್ನು ಮುನ್ನಡೆಸಿದ ವ್ಯಕ್ತಿ ಒಬ್ಬ ಉಪದೇಶಕ ಮತ್ತು ಪಾಕಿಸ್ತಾನ ಮರ್ಕಾಜಿ ಮುಸ್ಲಿಂ ಲೀಗ್ (PMML) ಪಕ್ಷದ ಸದಸ್ಯರಾಗಿದ್ದು, ಅವರಿಗೆ “3 ಹೆಣ್ಣುಮಕ್ಕಳು, ಒಬ್ಬ ಮಗ” ಇದ್ದಾನೆ ಎಂದು ಹೇಳಿದ್ದರು. ಜತೆಗೆ, ಆತನ ರಾಷ್ಟ್ರೀಯ ಗುರುತಿನ ಸಂಖ್ಯೆಯನ್ನೂ ಬಹಿರಂಗಪಡಿಸಿದ್ದರು.
ಆದರೆ, ಆತನ ಗುರುತಿನ ಸಂಖ್ಯೆಯು ಈ ಹಿಂದೆಯೇ ಅಮೆರಿಕ ಬಿಡುಗಡೆ ಮಾಡಿದ್ದ ಭಯೋತ್ಪಾದಕರ ಪಟ್ಟಿಯಲ್ಲಿನ ದತ್ತಾಂಶಗಳಲ್ಲಿನ ವಿವರಗಳಿಗೆ ಹೊಂದಿಕೆಯಾಗಿತ್ತು.